ಎರಡನೆ ಹಂತದ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಆದ್ಯತೆ

ಡಿ.ಕೆ.ಶಿವಕುಮಾರ್
ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟಕ್ಕೆ ಸೇರ್ಪಡೆಯಾಗಲು ಸಚಿವ ಸ್ಥಾನದ ಆಕಾಂಕ್ಷಿಗಳು ಹೊಸದಿಲ್ಲಿಯಲ್ಲಿ ಬೀಡುಬಿಟ್ಟಿದ್ದು, ಮಂತ್ರಿ ಸ್ಥಾನಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ತೀವ್ರ ಲಾಬಿ ನಡೆಸುತ್ತಿದ್ದಾರೆ.
ಮೊದಲ ಹಂತದಲ್ಲಿ 13 ಮಂದಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಿದ್ದು, ಯು.ಟಿ.ಖಾದರ್, ಡಾ.ಯತೀಂದ್ರ ಅವರನ್ನು ಹೊರತುಪಡಿಸಿದರೆ ಬಹುತೇಕರು ಈ ಹಿಂದೆ ಸಿದ್ದರಾಮಯ್ಯ ಅವಧಿಯಲ್ಲಿ ಸಚಿವರಾಗಿದ್ದವರೇ ಇದ್ದಾರೆ. ಇದೀಗ ಎರಡನೇ ಹಂತದಲ್ಲಿ ಹೊಸಮುಖಗಳಿಗೆ ಆದ್ಯತೆ ನೀಡಲು ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಹಲವು ಶಾಸಕರು ಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ.
ಸಂಪುಟದಲ್ಲಿ ಇನ್ನೂ 20 ಸ್ಥಾನಗಳು ಖಾಲಿ ಉಳಿದಿದ್ದು, ಈ ತಿಂಗಳ ಅಂತ್ಯಕ್ಕೆ ಎರಡನೇ ಹಂತದ ಸಂಪುಟಕ್ಕೆ ಯಾರೆಲ್ಲಾ ಸೇರ್ಪಡೆಯಾಗಲಿದ್ದಾರೆ ಎಂಬುದು ಗೊತ್ತಾಗಲಿದೆ. ಇನ್ನೂ ಎರಡು ವರ್ಷದಲ್ಲಿ ವಿಧಾನಸಭೆ ಚುನಾವಣೆಯೂ ಬರುತ್ತಿದೆ. ಆ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಯುವಕರಿಗೆ ಆದ್ಯತೆ ನೀಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
2028ರ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಹಾಗೂ ಪಕ್ಷ ಸಂಘಟನೆ ದೃಷ್ಟಿಯಿಂದ ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಆ ಹಿನ್ನೆಲೆಯಲ್ಲಿ ಎರಡನೇ ಹಂತದಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಕುತೂಹಲಕ್ಕೆ ಕಾರಣವಾಗಿದೆ.
‘ಎರಡನೇ ಹಂತದ ಸಂಪುಟ ವಿಸ್ತರಣೆ ಸಂಬಂಧ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಮೂರು ವರ್ಷ ಆರೋಗ್ಯ ಇಲಾಖೆಯಲ್ಲಿ ಪಾರದರ್ಶಕವಾಗಿ ಕೆಲಸ ಮಾಡಿದ್ದೇನೆ. ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದೇನೆ. ಎಲ್ಲರಿಗೂ ನನ್ನ ಕೆಲಸದ ಬಗ್ಗೆ ಮೆಚ್ಚುಗೆಯೂ ಇದೆ. ನನಗೆ ಖಾತೆ ಕೊಡುವುದು ವರಿಷ್ಠರಿಗೆ ಬಿಟ್ಟ ವಿಚಾರ’ ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.
‘ಸಂಪುಟ ವಿಸ್ತರಣೆ ವೇಳೆ ಹೊಸಬರಿಗೂ ಅವಕಾಶ ನೀಡಬೇಕಾಗುತ್ತದೆ. ಸಮುದಾಯದ ಹೆಸರಿನಲ್ಲಿ ಸಚಿವ ಸ್ಥಾನ ಸಿಗಬೇಕು ಎಂದೇನು ಇಲ್ಲ. ನಮ್ಮ ಅರ್ಹತೆ, ಕೆಲಸ ಕಾರ್ಯಗಳ ಮೇಲೆ ಗುರುತಿಸಬೇಕು. ಅರ್ಹತೆಗೆ ಜಾತಿ ಮಾನದಂಡ ಆಗಬಾರದು. ಖಾತೆ ಬಗ್ಗೆ ನಾನು ಹೆಚ್ಚಿಗೆ ಏನನ್ನೂ ಹೇಳುವುದಿಲ್ಲ’ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿ, ‘ಜೂ.20ರ ನಂತರ ಸಂಪುಟ ವಿಸ್ತರಣೆಯಾಗಲಿದೆ. ನಾನು ಸಚಿವ ಸ್ಥಾನಕ್ಕಾಗಿ ನನ್ನ ಬೇಡಿಕೆಯನ್ನಿಟ್ಟಿದೇನೆ. ರಾಜ್ಯದ ಎಲ್ಲ ನಾಯಕರು ಹಾಗೂ ವರಿಷ್ಠರ ಬಳಿ ನಾನು ಮನವಿ ಮಾಡಿದ್ದೇನೆ. ಸಚಿವ ಸ್ಥಾನ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ’ ಎಂದು ಹೇಳಿದರು.
‘ಸಚಿವ ಸಂಪುಟದಲ್ಲಿ ಮುಂಬೈ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ಇಲ್ಲ. ಬಿಜೆಪಿ ಪ್ರಭಾವ ಇರುವ ಭಾಗವಾಗಿದ್ದು, ಆ ಭಾಗಕ್ಕೆ ಒಂದು ಸ್ಥಾನ ನೀಡಬೇಕು. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ ಎಂಬ ಆರೋಪವಿದೆ. ಹೀಗಾಗಿ ಪ್ರಾದೇಶಿಕವಾರು ಪ್ರಾತಿನಿಧ್ಯ ಕಲ್ಪಿಸುವುದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದು’ ಎಂದು ಅವರು ತಿಳಿಸಿದರು.






