ಜು.8ಕ್ಕೆ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಜು.8ರ ಬುಧವಾರದಂದು ಆಗುವ ಸಾಧ್ಯತೆ ಇದ್ದು, ಜುಲೈ ಮೊದಲ ವಾರದಲ್ಲಿಯೇ ದಿಲ್ಲಿಗೆ ತೆರಳಿ ವರಿಷ್ಠ ನಾಯಕರ ಜೊತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಹಿತ ರಾಜ್ಯ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸಂಪುಟದಲ್ಲಿ ಖಾಲಿ ಇರುವ 20 ಸ್ಥಾನಗಳಿಗೆ ಶಾಸಕರನ್ನು ಆಯ್ಕೆ ಮಾಡುವುದು, ನಿಗಮ ಮಂಡಳಿಗಳ ನೇಮಕಾತಿ ಸೇರಿದಂತೆ ಮಹತ್ವದ ವಿಚಾರಗಳ ಬಗ್ಗೆ ಚರ್ಚೆಗೆ ಸಿಎಂ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ ಮೊದಲ ವಾರದಲ್ಲಿ ಹೊಸದಿಲ್ಲಿಗೆ ತೆರಳಲಿದ್ದಾರೆ ಎಂದು ಗೊತ್ತಾಗಿದೆ.
ಸ್ಥಳೀಯವಾಗಿ ಜಿಲ್ಲಾ ಮಟ್ಟದಲ್ಲಿ ಶಾಸಕರ ಜನಪ್ರಿಯತೆ, ಸಮುದಾಯದ ನಾಯಕತ್ವ ಹಾಗೂ ಆರ್ಥಿಕ ಹಿನ್ನೆಲೆಯನ್ನು ಮಾನದಂಡವಾಗಿ ಇಟ್ಟುಕೊಂಡು, ಬಳಿಕ ಸಾಮಾಜಿಕ ನ್ಯಾಯ, ಭೌಗೋಳಿಕ ಆದ್ಯತೆ ಅನುಸಾರ ಸಂಭವನೀಯ ಸಚಿವರ ಕರಡು ಪಟ್ಟಿ ತಯಾರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟಿಸುವ ಯುವ ಉತ್ಸಾಹಿ ಮತ್ತು ಬದ್ಧತೆಯ ತಂಡವೊಂದು ಅಗತ್ಯವಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಪ್ರಸ್ತುತ ಸಂಪುಟ ವಿಸ್ತರಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ಲಾಬಿಗಳಿಗೆ ಮಣಿಯದೆ ಡಿ.ಕೆ.ಶಿವಕುಮಾರ್ ತಮದೇ ಆದ ತಂಡ ಕಟ್ಟಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಅವಕಾಶ ನೀಡಬಹುದು ಎನ್ನುವ ಮಾತುಗಳು ಕೇಳಿಬಂದಿವೆ.
ರಾಜ್ಯ ರಾಜಕೀಯ ಈವರೆಗೂ ಅತ್ಯಂತ ಶಾಂತರೂಪದಲ್ಲಿ ಮುನ್ನಡೆಯುತ್ತಿವೆ. ಶಾಸಕರಲ್ಲಿ ಅಸಮಾಧಾನಗಳಾಗಲಿ, ಅಪಸ್ವರಗಳಾಗಲಿ ಕಂಡು ಬರುತ್ತಿಲ್ಲ. ಆದರೆ ಭವಿಷ್ಯದಲ್ಲೂ ಇದೇ ರೀತಿಯ ವಾತಾವರಣ ಇರಲಿದೆಯೇ ಎಂಬ ಅನುಮಾನಗಳಿವೆ. ಸಂಪುಟಕ್ಕೆ ಸೇರಲು ಹಿರಿಯ ಹಾಗೂ ಪ್ರಭಾವಿ ಶಾಸಕರು ಲಾಬಿ ನಡೆಸುತ್ತಿದ್ದಾರೆ. ಒಂದು ವೇಳೆ ಅವಕಾಶ ಸಿಗದೇ ಇದ್ದರೆ ಅವರು ತಟಸ್ಥರಾಗಿ ಇರುವ ಸಾಧ್ಯತೆಗಳಂತೂ ಇಲ್ಲ. ಒಟ್ಟಿನಲ್ಲಿ ಪಕ್ಷದಲ್ಲಿ ಅವಕಾಶಗಳು ಸಿಕ್ಕವರಿಗೇ ಸಿಗುತ್ತಿವೆ. ಪಕ್ಷ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ ಹಲವಾರು ಮಂದಿ ನಾಲ್ಕೈದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಈವರೆಗೂ ಸಂಪುಟ ಸೇರಲಾಗಿಲ್ಲ. ಈ ರೀತಿ ಸುಮಾರು 40ಕ್ಕೂ ಹೆಚ್ಚು ಮಂದಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಮಣೆ ಹಾಕಬೇಕಾದ ಅನಿವಾರ್ಯತೆ ಡಿ.ಕೆ.ಶಿವಕುಮಾರ್ ಅವರ ಮುಂದಿದೆ.






