ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ | ಫಲಾನುಭವಿಗಳು ಪಡೆದಿರುವ ಸಾಲಕ್ಕೆ ಬಡ್ಡಿ ಸಹಾಯಧನ : ಸಚಿವ ಸಂಪುಟ ನಿರ್ಧಾರ

ಎಚ್.ಕೆ.ಪಾಟೀಲ್
ಬೆಂಗಳೂರು : ಬೆಂಗಳೂರಿನಲ್ಲಿ ಜಾರಿಯಲ್ಲಿರುವ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯ ಫಲಾನುಭವಿಗಳು ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲಕ್ಕೆ ಪಾವತಿಸಬೇಕಾಗಿರುವ ಬಡ್ಡಿಗೆ ಸರಕಾರದ ಸಹಾಯಧನವನ್ನು ಒದಗಿಸುವ ‘ಬಡ್ಡಿ ಸಹಾಯಧನ ಯೋಜನೆ’ಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಸಚಿವ ಸಂಪುಟ ಸಭೆಯ ನಿರ್ಣಗಳನ್ನು ತಿಳಿಸಿದರು.
ಬೆಂಗಳೂರು ನಗರದಲ್ಲಿ ಜಾರಿಯಲ್ಲಿರುವ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ನಿರ್ಮಿಸುತ್ತಿರುವ 45,124 ಮನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು, ಫಲಾನುಭವಿಗಳ ಹಣಕಾಸಿನ ಸಾಮರ್ಥ್ಯದ ಕೊರತೆ, ರಾಷ್ಟ್ರೀಕೃತ, ಖಾಸಗಿ, ಎನ್ಬಿಎಫ್ಸಿ ಹಣಕಾಸು ಸಂಸ್ಥೆಗಳ ಅಧಿಕ ಬಡ್ಡಿ ದರ, ಕಡಿಮೆ ಸಿಬಿಲ್ ಅಂಕಗಳ ಕಾರಣಗಳನ್ನು ಆರ್ಥಿಕ ತೊಡಕುಗಳೆಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು.
ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಫಲಾನುಭವಿಗಳು ಪಾವತಿಸುವ ಮಾಸಿಕ ಸಾಲದ ಕಂತಿನ ಹೊರೆಯನ್ನು ಕಡಿಮೆ ಮಾಡಲು ಸಾಲದ ಬಡ್ಡಿಯಲ್ಲಿ ಶೇ.3 ರಿಂದ 5 ರಷ್ಟು ಮೊತ್ತವನ್ನು ಸಹಾಯಧನವಾಗಿ ಸರಕಾರದಿಂದ ಪಾವತಿಸಿ, ಬಡ್ಡಿ ಸಬ್ಸಿಡಿಯೆಂದು ನೀಡಲು ಪ್ರಸ್ತಾಪಿಸಲಾಗಿದ್ದು, ಅದರಂತೆ, ಬಡ್ಡಿ ಸಹಾಯಧನ ಯೋಜನೆಯನ್ನು ಜಾರಿಗೆ ತರಲು ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಈ ಯೋಜನೆಯಡಿ ಫಲಾನುಭವಿಗಳ ಸಾಲದ ಮಾಸಿಕ ಕಂತಿನ ಬಡ್ಡಿ ಭಾಗದಲ್ಲಿ 3 ಸಾವಿರ ರೂ.ಗಳ ಮಿತಿಗೆ ಒಳಪಟ್ಟು ಸರಕಾರದಿಂದ ಶೇ.3 ರಿಂದ ಶೇ.5ರವರೆಗೆ ಸಹಾಯಧನ ನೀಡಿ, ಸರಕಾರದಿಂದ ಭರಿಸಿ ಫಲಾನುಭವಿಗಳ ಸಾಲದ ಕಂತಿನ ಹೊರೆಯನ್ನು ತಗ್ಗಿಸಲು ಈ ಬಡ್ಡಿ ಸಹಾಯಧನವನ್ನು ನೀಡಲಾಗುವುದು. ಫಲಾನುಭವಿಯ ಸಾಲದ ಅವಧಿಯ 10 ವರ್ಷಗಳ ಅವಧಿಗೆ ಮಾತ್ರ ಈ ಬಡ್ಡಿ ಸಬ್ಸಿಡಿ ಲಭ್ಯವಿರಲಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಬೆಂಗಳೂರಿನ ಹೆಬ್ಬಾಳ(ಎಸ್ಟೀಮ್ ಮಾಲ್) ಜಂಕ್ಷನ್ನಿಂದ ಎಚ್ಎಸ್ಆರ್ ಲೇಔಟ್ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಉತ್ತರ-ದಕ್ಷಿಣ ಕಾರಿಡಾರ್(ಟನಲ್ ರಸ್ತೆ) ಯೋಜನೆಯನ್ನು ಎರಡು ಪ್ಯಾಕೇಜ್ಗಳಲ್ಲಿ ಬೂಟ್ ಮಾದರಿ(ಸಂಸ್ಥೆಯೊಂದು ರಸ್ತೆಯನ್ನು ನಿರ್ಮಿಸಿ, ಆನಂತರ ಸರಕಾರಕ್ಕೆ ಹಸ್ತಾಂತರ ಮಾಡುವುದು)ಯಲ್ಲಿ ಅನುಷ್ಠಾನಗೊಳಿಸಲು ಸಿದ್ಧಪಡಿಸಿರುವ 17,780 ಕೋಟಿ ರೂ.ಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ರಸ್ತೆಯನ್ನು ನಿರ್ಮಿಸುವ ಸಂಸ್ಥೆಯೇ 30 ವರ್ಷಗಳ ಕಾಲ ಇದನ್ನು ನಿರ್ವಹಣೆ ಮಾಡಬೇಕು. ರಸ್ತೆ ನಿರ್ಮಾಣಕ್ಕೆ ಜಾಗತಿಕ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಈ ರಸ್ತೆಯಲ್ಲಿ ಟೋಲ್ ಸಂಗ್ರಹ ಮಾಡಲಾಗುವುದು. ಎಷ್ಟು ಪ್ರಮಾಣದಲ್ಲಿ ಟೋಲ್ ಸಂಗ್ರಹ ಮಾಡಬೇಕು ಎಂಬುದರ ಕುರಿತು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.
ಘನತ್ಯಾಜ್ಯ ನಿರ್ವಹಣೆ ಮರು ಟೆಂಡರ್: ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿನ ಸಮಗ್ರ ಘನತ್ಯಾಜ್ಯ ನಿರ್ವಹಣೆಗಾಗಿ ಸರಕಾರದ ಅನುಮೋದನೆಯೊಂದಿಗೆ ನಾಲ್ಕು ಪ್ಯಾಕೇಜ್ಗಳನ್ನಾಗಿ ಮಾಡಿ, ಟೆಂಡರ್ ಕರೆದ ಸಂದರ್ಭದಲ್ಲಿ ಯಾವುದೇ ಬಿಡ್ಡುದಾರರು ಭಾಗವಹಿಸಿರಲಿಲ್ಲ. ಆದುದರಿಂದ, ನಾಲ್ಕರ ಬದಲಿಗೆ ಎರಡು ಪ್ಯಾಕೇಜ್ಗಳಲ್ಲಿ ಮರು ಟೆಂಡರ್ ಮಾಡಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಇತರ ನಿರ್ಣಯಗಳು: ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ 13 ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಹಾಗೂ ನಿರ್ವಹಣೆಗಾಗಿ ‘ಗೃಹ ಆರೋಗ್ಯ’ ಯೋಜನೆ ಜಾರಿಗೊಳಿಸಲು ಮತ್ತು ಅಗತ್ಯವಿರುವ ತಪಾಸಣಾ ಉಪಕರಣಗಳನ್ನು ಹಾಗೂ ಔಷಧಿಗಳನ್ನು 185.74 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರರ ಹಾಜರಾತಿ ಗುರುತಿಸಲು ‘ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ’ಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಮಕ್ಕಳಲ್ಲಿ ಕಂಡುಬರುವ ಶ್ರವಣದೋಷವನ್ನು ಆರಂಭದಲ್ಲಿಯೇ ಗುರುತಿಸಿ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸುವ ಶ್ರವಣ ಸಂಜೀವಿನಿ ಯೋಜನೆಯನ್ನು 12 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಿದೆ.
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಹುಬ್ಬಳ್ಳಿ ಕೇಂದ್ರಕ್ಕೆ ಅವಶ್ಯವಿರುವ ಉಪಕರಣಗಳನ್ನು 55 ಕೋಟಿ ರೂ., ಬೆಂಗಳೂರು, ಮೈಸೂರು ಮತ್ತು ಕಲಬುರಗಿ ಕೇಂದ್ರಗಳಿಗೆ ಅಗತ್ಯವಿರುವ ಉಪಕರಣಗಳನ್ನು 126 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶ ಹಾಗೂ ತುಮಕೂರು ಜಿಲ್ಲೆಯ ವಸಂತ ನರಸಾಪುರ ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳನ್ನು ಒಟ್ಟು 193 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಐಐಎಸ್ಸಿ ಆವರಣದಲ್ಲಿ ಕ್ವಾಂಟಮ್ ಸಂಶೋಧನಾ ಪಾರ್ಕ್: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಆವರಣದಲ್ಲಿ 48 ಕೋಟಿ ರೂ.ಅಂದಾಜು ಮೊತ್ತದಲ್ಲಿ ಮೂರುವರೆ ವರ್ಷಗಳಲ್ಲಿ ಕ್ವಾಂಟಮ್ ಸಂಶೋಧನಾ ಪಾರ್ಕ್ ಹಂತ-2ನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಈ ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆಗಾಗಿ ಶೈಕ್ಷಣಿಕ, ಕೈಗಾರಿಕಾ ಮತ್ತು ಸರಕಾರಿ ಸಂಸ್ಥೆಗಳ ಸದಸ್ಯರನ್ನೊಳಗೊಂಡಂತೆ ಆಡಳಿತ ಮಂಡಳಿ (ಜಿಸಿ) ಮತ್ತು ಯೋಜನಾ ಮೇಲ್ವಿಚಾರಣಾ ಸಮಿತಿ (ಪಿಎಂಸಿ) ಅನ್ನು ರಚಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಐಟಿಐಗಳಿಗೆ ಬಾಹ್ಯ ಅನುದಾನ: ಸರ್ಕಾರಿ ಐಟಿಐಗಳು, ಕೆಜಿಟಿಟಿಐಗಳು, ಕೆಎಸ್ಡಿಎ ಮತ್ತು ಜೆಟಿಎಸ್ ಉಪಕ್ರಮ ಪ್ರಸ್ತಾವನೆಯನ್ನು ಬಲಪಡಿಸುವ ಕಾರ್ಯವನ್ನು 5 ವರ್ಷಗಳಲ್ಲಿ ಏಷಿಯನ್ ಅಭಿವೃದ್ಧಿ ಬ್ಯಾಂಕ್ ನಿಂದ 970 ಕೋಟಿ ರೂ.ಗಳ ಹಾಗೂ ರಾಜ್ಯ ಸರಕಾರದಿಂದ 416 ಕೋಟಿ ರೂ.ಬಾಹ್ಯ ನಿಧಿಯ ಮೂಲಕ ಕಾರ್ಯಗತಗೊಳಿಸಲು ಕೇಂದ್ರ ಸರಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯ ಮೂಲಕ ಪ್ರಾಥಮಿಕ ಯೋಜನಾ ಪ್ರಸ್ತಾವನೆ ವರದಿಯನ್ನು(ಪಿಪಿಆರ್) ಏಷ್ಯನ್ ಅಭಿವೃದ್ಧಿ ಬ್ಯಾಂಕ್ಗೆ ಸಲ್ಲಿಸಿರುವುದಕ್ಕೆ ಘಟನೋತ್ತರ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಸಂತ ಸೇವಾಲಾಲ್ ಹೆಸರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 1ನೆ ತರಗತಿಯಿಂದ 5ನೆ ತರಗತಿಯವರೆಗೆ ಒಂದು ವಸತಿ ಶಾಲೆ ಮತ್ತು ಕ್ರೈಸ್ ವತಿಯಿಂದ 6ನೆ ತರಗತಿಯಿಂದ 12ನೆ ತರಗತಿಯವರೆಗೆ ಒಟ್ಟು ಮೂರು ವಸತಿ ಶಾಲೆಗಳನ್ನು 50 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಅರಸೀಕೆರೆಯಲ್ಲಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣವನ್ನು 20 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಪುನರ್ ನಿರ್ಮಾಣ ಮಾಡಲು ಅನುಮೋದನೆ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಏರ್ ಸ್ಟ್ರಿಪ್ ಅನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವ 17.01 ಎಕರೆ ಖಾಸಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು 17.05 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಕೃಷ್ಣರಾಜನಗರ ನಾಲೆಗೆ ಸಿಮೆಂಟ್ ಕಾಂಕ್ರೀಟ್ ಲೈನಿಂಗ್ ಮಾಡುವ ಆಧುನೀಕರಣ ಕಮಗಾರಿಯನ್ನು 108 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ವಿವಿಧ ಮಾದರಿಯ 56 ಹೊಸ ಬಸ್ಸುಗಳನ್ನು 35.20 ಕೋಟಿ ರೂ.ಗಳ ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ರಾಜ್ಯ ಸರಕಾರದಿಂದಲೇ 108 ಆರೋಗ್ಯ ಕವಚ ನಿರ್ವಹಣೆ :
108 ಆರೋಗ್ಯ ಕವಚ ಸೇವೆಯನ್ನು ಒಡಂಬಡಿಕೆಯ ಪಾಲುದಾರರಾದ ಇ.ಎಂ.ಆರ್.ಐ ಗ್ರೀನ್ ಹೆಲ್ತ್ ಸರ್ವೀಸಸ್ ರವರಿಂದ ಹಿಂಪಡೆದು ಈ ಸೇವೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿರ್ವಹಿಸಲು ಸರಕಾರದ ವತಿಯಿಂದ ರಾಜ್ಯ ಮಟ್ಟದಲ್ಲಿ 112 ಎನ್ಇಆರ್ಎಸ್ಎಸ್ ತಂತ್ರಾಂಶವನ್ನು ಬಳಸಿಕೊಂಡು ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಅನ್ನು ಸ್ಥಾಪಿಸಲು ಹಾಗೂ ಜಿಲ್ಲಾಡಳಿತದ ಮುಖಾಂತರ ಆಂಬ್ಯುಲೆನ್ಸ್ ಗಳ ನಿರ್ವಹಣೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಎಚ್.ಕೆ.ಪಾಟೀಲ್, ಕಾನೂನು ಸಚಿವ







