ಮುಂದಿನ ಅಧಿವೇಶನದಲ್ಲಿ ಬಾಲ್ಯ ವಿವಾಹ ನಿಷೇಧ ವಿಧೇಯಕ ಮಂಡನೆ: ಸಂಪುಟ ತೀರ್ಮಾನ
‘ಬಾಲ್ಯ ವಿವಾಹ ಅಷ್ಟೇ ಅಲ್ಲ ನಿಶ್ಚಿತಾರ್ಥವು ಶಿಕ್ಷಾರ್ಹ ಅಪರಾಧ’

ಎಚ್.ಕೆ.ಪಾಟೀಲ್
ಬೆಂಗಳೂರು : ರಾಜ್ಯದಲ್ಲಿ ಬಾಲ್ಯವಿವಾಹ ಅಷ್ಟೇ ಅಲ್ಲ, ಅಪ್ರಾಪ್ತರ ನಿಶ್ಚಿತಾರ್ಥವು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ‘ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025’ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡಿಸಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಾಲ್ಯ ವಿವಾಹ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಬಾಲ್ಯ ವಿವಾಹ ಮಾಡುವವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲು ಹಿಂದಿನ ಕಾನೂನಿನಲ್ಲಿ ಅವಕಾಶವಿತ್ತು ಎಂದು ಹೇಳಿದರು.
ಬಾಲ್ಯವಿವಾಹಕ್ಕಾಗಿ ನಿಶ್ಚಿತಾರ್ಥ ಮಾಡಿಸುವವರ ವಿರುದ್ಧವು ಕ್ರಮ ಕೈಗೊಳ್ಳಲು ಈ ಉದ್ದೇಶಿತ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗುವುದು. ಅಷ್ಟೇ ಅಲ್ಲ ಕೆಲವು ಕಡೆ ಆಚರಣೆಯಲ್ಲಿರುವ ತೊಟ್ಟಿಲು ಮದುವೆ ವಿರುದ್ಧವು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್.ಕೆ.ಪಾಟೀಲ್ ಹೇಳಿದರು.
2023-24ರ ಅವಧಿಯಲ್ಲಿ ಸುಮಾರು 700 ಬಾಲ್ಯವಿವಾಹಗಳು ರಾಜ್ಯಾದ್ಯಂತ ವರದಿಯಾಗಿವೆ. ಬಾಲ್ಯವಿವಾಹ ತಡೆಗೆ ಕಟ್ಟುನಿಟ್ಟಿನ ಕ್ರಮಗಳು ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಿದಂತೆ ಈ ಪ್ರಸ್ತಾವನೆ ಮಂಡಿಸಲಾಗಿತ್ತು ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಇತರ ನಿರ್ಣಯಗಳು: ಸ್ಪೇಸ್ಟೆಕ್ನಲ್ಲಿ ಉತ್ಕೃಷ್ಠತಾ ಕೇಂದ್ರವನ್ನು ಮುಂದಿನ ಐದು ವರ್ಷಗಳ ಅವಧಿಯಲ್ಲಿ 10 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲಾಗುವುದು. ಈ ಸ್ಪೇಸ್ಟೆಕ್ನಲ್ಲಿ ಉತ್ಕøಷ್ಟತಾ ಕೇಂದ್ರವನ್ನು ಸ್ಥಾಪಿಸುವ ಕುರಿತು ಸ್ಯಾಟಲೈಟ್ ಕಮ್ಯುನಿಕೇಷನ್ ಇಂಡಸ್ಟ್ರಿ ಅಸೋಸಿಯೇಷನ್(ಎಸ್ಐಎ-ಇಂಡಿಯಾ) ಅನ್ನು ಅನುಷ್ಠಾನ ಪಾಲುದಾರರಾಗಿ ಆಯ್ಕೆ ಮಾಡಲು ನಿರ್ಣಯಿಸಲಾಗಿದೆ.
ಐದು ವರ್ಷಗಳ ಅವಧಿಯಲ್ಲಿ 1000 ಕೋಟಿ ರೂ.ಗಳ ಒಟ್ಟು ಬಜೆಟ್ ಹಂಚಿಕೆಯೊಂದಿಗೆ ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ(ಲೀಪ್)ವನ್ನು ಪ್ರಾರಂಭಿಸಲಾಗುವುದು. ಮೊದಲ ವರ್ಷದಲ್ಲಿ ಈ ಯೋಜನೆಯ ಅನುಷ್ಟಾನಕ್ಕಾಗಿ 200 ಕೋಟಿ ರೂ.ಗಳನ್ನು ಮಂಜೂರು ಮಾಡಲು ನಿರ್ಧರಿಸಲಾಗಿದೆ. ಕರ್ನಾಟಕ ಜಾಗತಿಕ ಸಾಮಥ್ರ್ಯ ಕೇಂದ್ರ ನೀತಿ 2024-2029ಕ್ಕೆ ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ.
ರಾಯಚೂರಿನಲ್ಲಿ ಕಿದ್ವಾಯಿ: ರಾಯಚೂರಿನ ರಾಜೀವ್ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ 50 ಕೋಟಿ ರೂ.ವೆಚ್ಚದಲ್ಲಿ ಕಿದ್ವಾಯಿ ಫೆರಿಫೆರಲ್ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪಿಸಲು ಹಾಗೂ ಈ ವೆಚ್ಚವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಭರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಸ್ಥಾಪಿಸಲು ಹೆಚ್ಚುವರಿಯಾಗಿ ಅವಶ್ಯವಿರುವ ವೈದ್ಯಕೀಯ ಉಪಕರಣ, ಪೀಠೋಪಕರಣ ಹಾಗೂ ಇತರೆ ಬಾಬ್ತುಗಳ ಒಟ್ಟಾರೆ 62 ಕೋಟಿ ರೂ.ಗಳ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿರುವ ಯರಗಟ್ಟಿ ಏತ ನೀರಾವರಿ ಯೋಜನೆಯ ನವೀಕರಣ ಕಾಮಗಾರಿಯನ್ನು 25 ಕೋಟಿ ರೂ., ರೇಣುಕಾ ಏತ ನೀರಾವರಿ ಯೋಜನೆಯ ನವೀಕರಣ ಕಾಮಗಾರಿಯನ್ನು 20 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದ ಹತ್ತಿರ ತುಂಗಭದ್ರಾ ನದಿಯಿಂದ ನೀರನ್ನೆತ್ತಿ ತುಂಗಭದ್ರಾ ಎಡದಂಡೆ ಕಾಲುವೆಯ ಡಿ-32 ಮತ್ತು ಡಿ-36 ವ್ಯಾಪ್ತಿಯ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಕಲ್ಪಿಸುವ 178 ಕೋಟಿ ರೂ.ಅಂದಾಜು ಮೊತ್ತದ ಸಾಲಗುಂದ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
ಸಿಂಧನೂರು ತಾಲೂಕಿನ ಮುಳ್ಳೂರು ಗ್ರಾಮದ ಬಳಿ ಸಿಂಧನೂರು ಹಳ್ಳಕ್ಕೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಿ, ತುಂಗಭದ್ರಾ ಎಡದಂಡೆ ಕಾಲುವೆಯ ಉಪ ವಿತರಣಾ ಕಾಲುವೆ 54/3ಆರ್ ರಡಿಯ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಕಲ್ಪಿಸುವ 29 ಕೋಟಿ ರೂ.ಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
ಎತ್ತಿನಹೊಳೆ ಯೋಜನೆ: ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಕುಡಿಯುವ ನೀರಿಗಾಗಿ ಹಂಚಿಕೆಯಾಗಿರುವ 0.512 ಟಿಎಂಸಿ ನೀರನ್ನು ಸಂಗ್ರಹಣಾ ಸ್ಥಳಕ್ಕೆ ಪೂರೈಸಲು ಅರಸೀಕೆರೆ ತಾಲೂಕಿನ 10 ಕೆರೆಗಳಿಗೆ ನೀರು ತುಂಬಿಸುವ 148.80 ಕೋಟಿ ರೂ. ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ.
2025-26ನೆ ಸಾಲಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಬೇಡಿಕೆಗಳಿಗೆ ಅನುಸಾರವಾಗಿ 890 ಔಷಧಗಳು, ಉಪಭೋಗ್ಯ ವಸ್ತುಗಳು ಹಾಗೂ ರಾಸಾಯನಿಕಗಳನ್ನು 880.68 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಖರೀದಿಸಲು, ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 46 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ.
ಅಲೀಪುರ ಪಟ್ಟಣ ಪಂಚಾಯಿತಿ: ಚಿಕ್ಕಬಳ್ಳಾಪುರ ಜಿಲ್ಲೆಯ ಅಲೀಪುರ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ‘ಅಲೀಪುರ ಪಟ್ಟಣ ಪಂಚಾಯಿತಿ’ ಪ್ರದೇಶವೆಂದು ಘೋಷಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೂಳೆಕೆರೆಯ ಜೀರ್ಣೋದ್ಧಾರ ಕಾಮಗಾರಿಯನ್ನು 34 ಕೋಟಿ ರೂ., ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕು ಮದಗ-ಮಾಸೂರು ಕೆರೆಯ ಎಡದಂಡೆ ಹಾಗೂ ಬಲದಂಡೆ ಮುಖ್ಯ ನಾಲೆಗಳ ಆಧುನೀಕರಣ ಕಾಮಗಾರಿಯನ್ನು 52.20 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ನಂಜಾಪುರ ಏತ ನೀರಾವರಿ ಯೋಜನೆಯ ಆಧುನೀಕರಣ ಕಾಮಗಾರಿಯನ್ನು 20 ಕೋಟಿ ರೂ., ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೂಳೆಕೆರೆಯ ಉತ್ತರ ನಾಲೆಗಳ ಅಭಿವೃದ್ಧಿ ಕಾಮಗಾರಿಯನ್ನು 47.75 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
ಕೆರೆಗಳಿಗೆ ನೀರು: ಕುಡಿಯುವ ನೀರಿನ ಉದ್ದೇಶಕ್ಕಾಗಿ ಮುದ್ದೇನಹಳ್ಳಿ ಬಳಿಯ ನಾಗಮಂಗಲ ಶಾಖಾ ಕಾಲುವೆಯಿಂದ ನೀರನ್ನು ಎತ್ತಿ ತುಮಕೂರು ಮತ್ತು ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಹೋಬಳಿಯ 18 ಕೆರೆಗಳನ್ನು ತುಂಬಿಸುವ ಕಾಮಗಾರಿಯ 74 ಕೋಟಿ ರೂ. ಮೊತ್ತದ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.
215.37ಕೋಟಿ ರೂ.ವೆಚ್ಚದಲ್ಲಿ ಸವದತ್ತಿ ಯಲ್ಲಮ್ಮ ಗುಡ್ಡ ಅಭಿವೃದ್ಧಿ: ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾಸ್ಕಿ ಯೋಜನೆಯಡಿ 100 ಕೋಟಿ ರೂ., ಪ್ರಸಾದ ಯೋಜನೆಯಡಿ 18 ಕೋಟಿ ರೂ., ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ನಿಧಿಯಿಂದ 97 ಕೋಟಿ ರೂ., ಪ್ರವಾಸೋದ್ಯಮ ಇಲಾಖೆಯ 15 ಕೋಟಿ ರೂ. ಸೇರಿದಂತೆ 215.37 ಕೋಟಿ ರೂ.ಗಳ ಮೊತ್ತದಲ್ಲಿ ಕೆಟಿಟಿಪಿ ಕಾಯ್ದೆಯಡಿ ಅನುμÁ್ಠನಗೊಳಿಸಲು ಡಿಪಿಎಆರ್ ಗೆ ಸರಕಾರದ ಅನುಮೋದನೆ ನೀಡಲು ಪ್ರವಾಸೋದ್ಯಮ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಜಿಲ್ಲಾಧಿಕಾರಿಯನ್ನು ಅನುಷ್ಠಾನ ಅಧಿಕಾರಿಯನ್ನಾಗಿ ನೇಮಿಸಲು ಹಾಗೂ ಯೋಜನೆ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
-ಎಚ್.ಕೆ.ಪಾಟೀಲ್, ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ







