ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ ʼಒಳಮೀಸಲಾತಿʼ ಹಂಚಿಕೆ : ಸಚಿವ ಸಂಪುಟ ತೀರ್ಮಾನ

ಬೆಂಗಳೂರು, ಆ.19 : ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಬಲಗೈ ಸಮುದಾಯಗಳಿಗೆ ಶೇ.6, ಎಡಗೈ ಸಮುದಾಯಗಳಿಗೆ ಶೇ.6 ಹಾಗೂ ಭೋವಿ, ಕೊರಮ, ಕೊರಚ, ಲಂಬಾಣಿ, ಬಂಜಾರ ಸೇರಿದಂತೆ ಇತರ ಸೂಕ್ಷ್ಮ ಅಲೆಮಾರಿ ಸಮುದಾಯಗಳಿಗೆ ಶೇ.5ರಷ್ಟು ಮೀಸಲಾತಿ ವರ್ಗೀಕರಣ ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ.
ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗ ಸಲ್ಲಿಸಿದ ವರದಿ ಕುರಿತು ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಅಧಿವೇಶನ ನಡೆಯುತ್ತಿರುವುದರಿಂದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಈ ಸಂಬಂಧ ವಿವರವಾದ ಹೇಳಿಕೆ ನೀಡಲಿದ್ದಾರೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಎಲ್ಲರಿಗೂ ಸಂತೋಷವಾಗಿದೆ. ಮೀಸಲಾತಿಯನ್ನು 6, 6, 5 ಎಂದು ಹಂಚಿಕೆ ಮಾಡಲಾಗಿದೆ. ಸಂಪುಟದಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, 30 ವರ್ಷಗಳ ಸುದೀರ್ಘ ಹೋರಾಟಕ್ಕೆ ಸಂದ ಜಯ ಇದು. ಅವಕಾಶ ವಂಚಿತರಿಗೆ ಮೀಸಲಾತಿಯ ಸೌಲಭ್ಯ ಸಿಗುವಂತೆ ಆಗಿದೆ. ನಮಗೆ ಶೇ.6ರಷ್ಟು ಮೀಸಲಾತಿ ನೀಡಬೇಕು ಎಂದು ಸದಾಶಿವ ಆಯೋಗ ಸೇರಿದಂತೆ ಎಲ್ಲ ಆಯೋಗಗಳು ಶಿಫಾರಸು ಮಾಡಿದ್ದವು. ಇದೀಗ ನ್ಯಾ.ನಾಗಮೋಹನ್ ದಾಸ್ ಅವರ ಆಯೋಗದ ಶಿಫಾರಸ್ಸಿನಂತೆ ನಮಗೆ ಶೇ.6ರಷ್ಟು ಮೀಸಲಾತಿ ಹಂಚಿಕೆ ಆಗಿರುವುದರಿಂದ ರಾಜ್ಯ ಸರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇಡೀ ಸಚಿವ ಸಂಪುಟಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಮುಗಿಸಿ ಹೊರಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಎಚ್.ಆಂಜನೇಯ, ಶಾಸಕ ಬಸಂತಪ್ಪ ನೇತೃತ್ವದಲ್ಲಿ ಜಮಾಯಿಸಿದ್ದ ದಲಿತ ಸಮುದಾಯದವರು ಬೃಹತ್ ಹೂವಿನ ಹಾರ ಹಾಕಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.







