‘ಜಾತಿ ಗಣತಿ’ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ | ಹೊಸ ಜಾತಿಗಳ ಸೇರ್ಪಡೆಯಿಂದ ಗೊಂದಲ : ಸಚಿವರ ಆಕ್ಷೇಪ

ಬೆಂಗಳೂರು, ಸೆ.18 : ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆ.22ರಿಂದ ಆರಂಭಿಸಲಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ(ಜಾತಿ ಗಣತಿ) ಕುರಿತು ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ.
ಹಿಂದುಳಿದ ವರ್ಗಗಳ ಆಯೋಗವು 331 ಜಾತಿಗಳನ್ನು ಸೇರ್ಪಡೆ ಮಾಡಿರುವುದರಿಂದ ಜಾತಿ, ಜಾತಿಗಳ ನಡುವೆಯೆ ಬಿರುಕು ಮೂಡಲು ಕಾರಣವಾಗುತ್ತದೆ. ಇದರಿಂದ ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಇಂತಹ ಗೊಂದಲ ಇರುವಾಗ ನಾವು ಸಮೀಕ್ಷೆ ನಡೆಸಿದರೆ ಸರಕಾರಕ್ಕೆ ಹಿನ್ನಡೆಯಾಗುತ್ತದೆ ಎಂದು ಕೆಲ ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಅಲ್ಲದೇ, ಸಮೀಕ್ಷೆಯನ್ನು ಮುಂದೂಡುವುದು ಉತ್ತಮ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಈಶ್ವರ್ ಖಂಡ್ರೆ, ಎಸ್.ಎಸ್.ಮಲ್ಲಿಕಾರ್ಜುನ್ ಸೇರಿದಂತೆ ಇನ್ನಿತರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಮೂರ್ನಾಲ್ಕು ಮಂದಿ ಸಚಿವರು ಮಾತ್ರ ಜಾತಿ ಗಣತಿ ಸಮೀಕ್ಷೆ ನಡೆಯಲಿ ಎಂದು ಹೇಳಿದ್ದಾರೆಂದು ತಿಳಿದು ಬಂದಿದೆ.
ಸಚಿವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜದಲ್ಲಿರುವ ಎಲ್ಲ ಜಾತಿಗಳಲ್ಲಿನ ಬಡವರಿಗೆ ಸರಕಾರದ ಸೌಲಭ್ಯಗಳು ಸಿಗಬೇಕು, ಅವರು ಅವಕಾಶಗಳಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಈ ಸಮೀಕ್ಷೆ ನಡೆಸಲಾಗುತ್ತಿದೆ. ಆದರೆ, ನನ್ನನ್ನು ಜಾತಿವಾದಿ ಎಂದು ಪಟ್ಟ ಕಟ್ಟಿ, ಮೇಲ್ವರ್ಗದ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಸಮೀಕ್ಷೆಯು ಬಡವರ ಪರವಾದದ್ದು. ಪ್ರತಿಯೊಬ್ಬರೂ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಿತಿಯನ್ನು ಅರಿಯಲು ಮಾಡುತ್ತಿರುವ ಸಮೀಕ್ಷೆ ಎಂದು ಜನಸಾಮಾನ್ಯರಿಗೆ ಹೇಗೆ ಮನವರಿಕೆ ಮಾಡಿಕೊಡುತ್ತೀರಿ ಎಂದು ಸಚಿವರಿಗೆ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಮೀಕ್ಷೆಗಾಗಿ ಸಿದ್ಧಪಡಿಸಿರುವ ಪ್ರಶ್ನಾವಳಿಯ ಕಾಲಂಗಳು ಗೊಂದಲಮಯವಾಗಿವೆ. ಇದೇ ಮಾದರಿ ಹಾಗೂ ಹೊಸ ಜಾತಿಗಳ ಪಟ್ಟಿಯನ್ನು ಮುಂದಿಟ್ಟುಕೊಂಡು ಸಮೀಕ್ಷೆ ಮಾಡಿಸಿದರೆ ಸರಕಾರಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಗುವ ಸಾಧ್ಯತೆಗಳಿವೆ. ಆದುದರಿಂದ, ಈ ಜಾತಿ ಪಟ್ಟಿಯ ಕುರಿತು ಇರುವ ಗೊಂದಲ ಪರಿಹರಿಸಿದ ಬಳಿಕವೇ ಸಮೀಕ್ಷೆಗೆ ಮುಂದಾದರೆ ಉತ್ತಮ ಎಂದು ಸಚಿವ ಎಂ.ಬಿ.ಪಾಟೀಲ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಸಚಿವರ ಅಭಿಪ್ರಾಯವನ್ನು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾತಿ ಗಣತಿ ಕುರಿತ ಎಲ್ಲ ಗೊಂದಲಗಳ ಕುರಿತು ಎದುರಾಗಿರುವ ಸಾಧಕ, ಬಾಧಕಗಳ ಕುರಿತು ನೀವು ಸಭೆ ನಡೆಸಿ ಚರ್ಚೆ ಮಾಡಿ, ನನಗೆ ವರದಿ ನೀಡಿ ಎಂದು ಹಿರಿಯ ಸಚಿವರಿಗೆ ಸೂಚಿಸಿದ್ದಾರೆ.
ಅದರಂತೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಡಾ.ಎಚ್.ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ, ಬೈರತಿ ಸುರೇಶ್ ಸೇರಿದಂತೆ ಇನ್ನಿತರ ಸಚಿವರು ವಿಧಾನಸೌಧದಲ್ಲಿ ತುರ್ತು ಸಭೆ ನಡೆಸಿ, ಜಾತಿ ಗಣತಿ ಕುರಿತು ಚರ್ಚೆ ನಡೆಸಿದರು.
ಸಚಿವರ ವಿರೋಧಕ್ಕೆ ಕಾರಣವೇನು?: 331 ಜಾತಿಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿರುವುದರಿಂದ ಸಮುದಾಯಗಳಲ್ಲೆ ಗೊಂದಲ ಉಂಟಾಗಿದೆ. ಧರ್ಮ, ಜಾತಿ ಹಾಗೂ ಇತರೆ ಕಾಲಂಗಳ ಕುರಿತು ಆಕ್ಷೇಪ ವ್ಯಕ್ತವಾಗುತ್ತಿದೆ. ಸಮೀಕ್ಷೆ ಸಂದರ್ಭದಲ್ಲಿ ಧರ್ಮದ ಕಾಲಂ ನಲ್ಲಿ ಲಿಂಗಾಯತರು ಏನು ಬರೆಸಬೇಕು ಎಂದು ಒಮ್ಮತ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗಿಲ್ಲ. ಕ್ರೈಸ್ತರ ಮುಂದೆ ಹಿಂದೂ ಜಾತಿಗಳ ಹೆಸರನ್ನು ಸೇರ್ಪಡೆ ಮಾಡಿರುವುದಕ್ಕೂ ವಿರೋಧ ವ್ಯಕ್ತವಾಗುತ್ತಿದೆ ಎಂದು ಸಚಿವರು ಸಂಪುಟ ಸಭೆಯ ಗಮನ ಸೆಳೆದರು.







