ಮೈಸೂರಿನ ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿ ಕ್ಯಾನ್ಸರ್ ಕೇಂದ್ರ ನಿರ್ಮಾಣ : ಸಂಪುಟ ಅನುಮೋದನೆ

ಎಚ್.ಕೆ.ಪಾಟೀಲ್
ಬೆಂಗಳೂರು : ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಅಧೀನದಲ್ಲಿ ಬರುವ ಪಿಕೆಟಿಬಿ ಆಸ್ಪತ್ರೆಯ ಆವರಣದಲ್ಲಿ ಪೆರಿಫೆರಲ್ ಕ್ಯಾನ್ಸರ್ ಕೇಂದ್ರವನ್ನು ನಿರ್ಮಿಸಲು ಅವಶ್ಯವಿರುವ ಉಪಕರಣಗಳನ್ನು 94.50 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಮಂಗಳೂರು ಹಜ್ ಭವನಕ್ಕೆ 20 ಕೋಟಿ ರೂ.: ಮಂಗಳೂರಿನ ಬಜ್ಪೆ ಗ್ರಾಮದಲ್ಲಿ 1.56 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ‘ಹಜ್ ಭವನ’ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು 20 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಅನ್ನಭಾಗ್ಯ ಯೋಜನೆಯಡಿ ಒದಗಿಸುವ ಇಂದಿರಾ ಆಹಾರ ಕಿಟ್(ಪೌಷ್ಠಿಕ ಆಹಾರ ಕಿಟ್)ನಲ್ಲಿನ ಪದಾರ್ಥಗಳಲ್ಲಿ ಒಂದು ಕೆಜಿ ಹೆಸರು ಕಾಳಿನ ವೆಚ್ಚಕ್ಕನುಗುಣವಾಗಿ ತೊಗರಿ ಬೇಳೆಯನ್ನು ಒಬ್ಬ ಅಥವಾ ಇಬ್ಬರು ಸದಸ್ಯರಿಗೆ 250 ಗ್ರಾಂ., ಮೂರು ಮತ್ತು ನಾಲ್ಕು ಸದಸ್ಯರಿರುವ ಕುಟುಂಬಗಳಿಗೆ 500 ಗ್ರಾಂ., ಐದು ಮತ್ತು ಅದಕ್ಕಿಂತ ಹೆಚ್ಚಿನ ಸದಸ್ಯರಿರುವ ಕುಟುಂಬಗಳಿಗೆ 750 ಗ್ರಾಂ., ಅಡುಗೆ ಎಣ್ಣೆ 1 ಲೀಟರ್, ಸಕ್ಕರೆ 1 ಕೆಜಿ ಹಾಗೂ ಉಪ್ಪು 1 ಕೆಜಿ ವಿತರಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
2021-22ನೆ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಿರಿಸಲಾಗಿದ್ದ ಉರ್ದು ಮಾಧ್ಯಮದ 67 ಶಿಕ್ಷಕರ ಹುದ್ದೆಗಳನ್ನು ಸಾಮಾನ್ಯ ಅಭ್ಯರ್ಥಿಗಳಿಂದ ಭರ್ತಿ ಮಾಡಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ-02ಯನ್ನು ಅನುಷ್ಠಾನಗೊಳಿಸಲು ರಚಿಸಲಾಗಿರುವ ರಾಜ್ಯ ಮಟ್ಟದ ತಾಂತ್ರಿಕ ಸಮಿತಿ ಮತ್ತು ರಾಜ್ಯ ಉನ್ನತಾಧಿಕಾರಯುಕ್ತ ಸಮಿತಿಗಳ ಕಾರ್ಯಾವ್ಯಾಪ್ತಿಯನ್ನು ಪರಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಬೆಂಗಳೂರು ಉತ್ತರ ತಾಲೂಕು ಕಸಬಾ ಹೋಬಳಿ ಹೆಬ್ಬಾಳ ಗ್ರಾಮದಲ್ಲಿರುವ ಕೃಷಿ ಇಲಾಖೆಗೆ ಸೇರಿದ ಪ್ರಸಕ್ತ ಕರ್ನಾಟಕ ಪಶು ಹಾಗೂ ಪಶು ವೈದ್ಯಕೀಯ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅನುಭೋಗದಲ್ಲಿರುವ 4 ಎಕರೆ ಜಮೀನನ್ನು ನ್ಯಾಯಾಂಗ ಇಲಾಖೆಗೆ ಉಚ್ಛ ನ್ಯಾಯಾಲಯದ ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ವಸತಿ ಗೃಹ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಸಾರಕ್ಕಿಯ ಮಧ್ಯಂತರ ತ್ಯಾಜ್ಯ ನೀರಿನ ಯಂತ್ರಾಗಾರ ಮತ್ತು ಅಗರಂನ ಮಧ್ಯಂತರ ತ್ಯಾಜ್ಯ ನೀರಿನ ಯಂತ್ರಾಗಾರದಿಂದ ಕೆ.ಸಿ.ವ್ಯಾಲಿಗೆ ಇರುವ ರೈಸಿಂಗ್ ಮೇನ್ ಸೇರಿ, ಕೆ.ಸಿ.ವ್ಯಾಲಿಯಲ್ಲಿ 60 ಎಂಎಲ್ಡಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ, ಅಗರಂನಲ್ಲಿ 120 ಎಂಎಲ್ಡಿ ಮತ್ತು ಸಾರಕ್ಕಿಯಲ್ಲಿ 18 ಎಂಎಲ್ಡಿ ಮಧ್ಯಂತರ ತ್ಯಾಜ್ಯ ನೀರಿನ ಯಂತ್ರಾಗಾರ ಘಟಕಗಳ 5 ವರ್ಷಗಳ ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು 49.91 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು, ವಿಜಯಪುರ ಜಿಲ್ಲೆಯ ವಿಜಯಪುರ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಕೆಲವು ಪ್ರದೇಶಗಳನ್ನು ಸೇರ್ಪಡೆಗೊಳಿಸಲು ಹಾಗೂ ಯಾದಗಿರಿ ಜಿಲ್ಲೆಯ ದೋರನಹಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಬೀದರ್ ಜಿಲ್ಲೆಯ ರಾಜೇಶ್ವರ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯನ್ನು ರಚಿಸಲು, ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ದೊಡ್ಡ ಹುಣಸೆ ಕಲ್ಮಠ ಶ್ರೀ ಚನ್ನಬಸವೇಶ್ವರ ಚಾರಿಟಬಲ್ ಟ್ರಸ್ಟ್ ನವರಿಗೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾಗಿರುವ ಹುಬ್ಬಳ್ಳಿ ತಾಲೂಕಿನ ಉಣಕಲ್ ಗ್ರಾಮದಲ್ಲಿನ 393.72 ಚದರ ಮೀಟರ್ ನಾಗರಿಕ ಸೌಲಭ್ಯ ನಿವೇಶನಕ್ಕೆ ನಿಗದಿಪಡಿಸಿರುವ ಗುತ್ತಿಗೆ ಮೊತ್ತಕ್ಕೆ ವಿನಾಯಿತಿ ನೀಡಲು ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.







