‘ಎ-ಖಾತಾ’ ನೀಡಲು ಸಚಿವ ಸಂಪುಟ ಸಭೆ ಅನುಮೋದನೆ

ಬೆಂಗಳೂರು : ರಾಜ್ಯ ವ್ಯಾಪ್ತಿ ಅನಧೀಕೃತವಾಗಿ ರಚಿಸಿರುವ ಬಡವಾಣೆಗಳಲ್ಲಿನ ಬಿ-ಖಾತಾ ನಿವೇಶನ, ಕಟ್ಟಡ ಸೇರಿದಂತೆ ವಿವಿಧ ಜಾಗಗಳಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯುವ ಷರತ್ತಿಗೊಳಪಟ್ಟು ‘ಎ-ಖಾತಾ’ ನೀಡಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಾಯ್ದೆಯನ್ನು ಉಲ್ಲಂಘಿಸಿ, ಅನಧೀಕೃತವಾಗಿ ರಚಿಸಿರುವ ಬಡವಾಣೆಗಳಲ್ಲಿನ ಬಿ-ಖಾತಾ ನಿವೇಶನ, ಕಟ್ಟಡ, ಅಪಾರ್ಟ್‍ಮೆಂಟ್, ಫ್ಲಾಟ್‍ಗಳಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯುವ ಷರತ್ತಿಗೊಳಪಟ್ಟು ಎ-ಖಾತಾ ನೀಡಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದರು.
ಈ ಪ್ರಸ್ತಾವನೆಯು ಅನಧಿಕೃತ ಬೆಳವಣಿಗೆಗಳನ್ನು ನಿಯಂತ್ರಿಸಲು, ಸಾರ್ವಜನಿಕ ಹಿತದೃಷ್ಟಿ ಹಾಗೂ ನಾಗರೀಕ ಸ್ನೇಹಿ ಸುಧಾರಣೆಗಳನ್ನು ಆಡಳಿತ ವ್ಯವಸ್ಥೆಯಲ್ಲಿ ತರುವ ಉದ್ದೇಶ ಹೊಂದಿವೆ. ವಿನ್ಯಾಸಗಳಿಗೆ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೇ ನಿವೇಶನಗಳನ್ನು ರಚಿಸಿ, ಪರಭಾರೆ ಮಾಡುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶದಿಂದ ಈಗಾಗಲೇ ಅನಧಿಕೃತವಾಗಿ ರಚಿತವಾಗಿರುವ ಬಡಾವಣೆಗಳನ್ನು ಕಾನೂನು ವ್ಯಾಪ್ತಿಗೆ ತರುವ ಉದ್ದೇಶವನ್ನು ಹೊಂದಲಾಗಿದೆ ಎಂದು ಅವರು ಉಲ್ಲೇಖಿಸಿದರು.
ಅದೇ ರೀತಿ, ಹೊಳೆನರಸೀಪುರ ಪಟ್ಟಣದಲ್ಲಿ ತಾಲೂಕು ಪಂಚಾಯಿತಿ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಯ 12.30 ಕೋಟಿ ರೂ., ಮೊತ್ತದ ಪರಿಷ್ಕೃತ ಅಂದಾಜು ಪಟ್ಟಿಗೆ ಅನುಮೋದನೆ ನೀಡಲಾಗಿದೆ. ತುಮಕೂರಿನ ಶಿರಾ ತಾಲೂಕು, ಕಲ್ಲುಕೋಟೆ ಗ್ರಾಮದಲ್ಲಿ ಹಾಗೂ ರಾಯಚೂರಿನ ಸಿರವಾರ ತಾಲೂಕಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ಕಾಂಗ್ರೆಸ್ ಭವನ ಟ್ರಸ್ಟ್ ಗೆ ಮಂಜೂರು ಮಾಡಲಾಗಿದೆ ಎಂದು ಅವರು ಹೇಳಿದರು.
ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ 3 ವರ್ಷಗಳ ಕಾರ್ಯಾಚರಣೆ ಹಾಗೂ ನಿರ್ವಹಣೆ ಕಾಮಗಾರಿ ಅಡಿ ಚಾಮರಾಜನಗರ ತಾಲೂಕಿನ 166 ಗ್ರಾಮಗಳಿಗೆ 33.04 ಕೋಟಿ ರೂ. ಹಾಗೂ ಗುಂಡ್ಲುಪೇಟೆ ತಾಲೂಕಿನ 131 ಗ್ರಾಮಗಳಿಗೆ 27.38 ಕೋಟಿಗಳಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಆಡಳಿತ ಭವನ ನಿರ್ಮಾಣದ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲು 70.70 ಕೋಟಿ ರೂ., ಅಂದಾಜು ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ.
ಪ್ರತಿ 1 ಗಂಟೆಗೆ 2 ಮೆಟ್ರಿಕ್ ಟನ್ ಸಾಬೂನು ತಯಾರಿಸುವ ಯಂತ್ರ: ‘ಕೆಎಸ್‍ಡಿಎಲ್ ಸಂಸ್ಥೆಯ ಬೆಂಗಳೂರು ಸಂಕೀರ್ಣದ ಉತ್ಪಾದನಾ ಸ್ಥಾವರದಲ್ಲಿ ಪ್ರತಿ ಗಂಟೆಗೆ ಎರಡು ಮೆಟ್ರಿಕ್ ಟನ್ ಸಾಬೂನು ತಯಾರಿಸುವ ನೂತನ ಯಂತ್ರೋಪಕರಣ ಖರೀದಿಸಲು ಸಚಿವ ಸಂಪುಟ ನಿರ್ಣಯಿಸಿದೆ’
-ಎಚ್.ಕೆ.ಪಾಟೀಲ್, ಕಾನೂನು ಸಚಿವ







