ನರೇಗಾ-ವಿಬಿ ಜಿ ರಾಮ್ ಜಿ ವಿಚಾರದಲ್ಲಿ ನ್ಯಾಯಾಂಗ ಹೋರಾಟ : ಸಚಿವ ಸಂಪುಟ ನಿರ್ಣಯ

ಬೆಂಗಳೂರು, ಮೇ 7 : ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ)ಯನ್ನು ಬದಲಾಯಿಸಿ, ವಿಬಿ ಜಿ ರಾಮ್ ಜಿ ಯೋಜನೆ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ನರೇಗಾ ಬದಲಿಗೆ ವಿಬಿ ಜಿ ರಾಮ್ ಜಿ ಅನುಷ್ಠಾನಕ್ಕೆ ಯತ್ನಿಸಿದೆ. ನರೇಗಾ ಯೋಜನೆ ಸ್ಥಗಿತ ಮಾಡಿದರೆ ಬಡವರಿಗೆ ಅನಾನುಕೂಲ ಆಗಲಿದೆ ಎಂದು ಹೇಳಿದರು.
ನರೇಗಾ ಮರು ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ನಾವು ಚಳವಳಿ ಮಾಡಿದ್ದೆವು. ಮೇ ತಿಂಗಳಾದರೂ ಈವರೆಗೆ ಇಡೀ ದೇಶದಲ್ಲಿ ವಿಬಿ ಜಿ ರಾಮ್ ಜಿ ಯೋಜನೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿಲ್ಲ, ಮಾರ್ಗಸೂಚಿಗಳು ಬಂದಿಲ್ಲ. ನರೇಗಾದಡಿಯಲ್ಲಿ ಬಾಕಿ ಕೆಲಸಗಳನ್ನು ಮುಂದುವರೆಸಬಹುದು ಎಂದು ಸುತ್ತೋಲೆ ಹೊರಡಿಸಿದ್ದಾರೆ. ಆದರೆ, ಅದಕ್ಕೆ ಯಾವುದೆ ಅನುದಾನ ಇಟ್ಟಿಲ್ಲ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ದೇಶದಲ್ಲಿ ಈ ಬಾರಿ ಮಳೆ ಕೊರತೆ, ನೀರಿನ ಸಂಕಷ್ಟ ಎದುರಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೂ ಬಡವರ ಕೆಲಸದ ಬಗ್ಗೆ ಕೇಂದ್ರ ಸರಕಾರ ಚಿಂತನೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸದನದಲ್ಲಿ ನಿರ್ಣಯ ಕೈಗೊಳ್ಳುವ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಿದ್ದೆವೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ ಎಂದು ಅವರು ತಿಳಿಸಿದರು.
ಆದರೂ, ಯಾವುದೆ ಪ್ರಯೋಜನವಾಗುತ್ತಿಲ್ಲ. ಆದುದರಿಂದ, ನ್ಯಾಯಾಲಯದ ಮೆಟ್ಟಿಲು ಹತ್ತಲು ರಾಜ್ಯ ಸರಕಾರ ನಿರ್ಣಯಿಸಿದೆ. ಕೇಂದ್ರ ಸರಕಾರದ ನಿಲುವು ರಾಜ್ಯಗಳ ಹಿತಾಸಕ್ತಿಗೆ ವಿರುದ್ಧವಾಗಿರುವುದರಿಂದ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಲು ನಿರ್ಣಯಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.






