‘ಕೆಪಿಎಸ್‍ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತಿಗೆ ರಾಜ್ಯಪಾಲರಿಗೆ ಶಿಫಾರಸು’ : ಸಂಪುಟ ಸಭೆ ತೀರ್ಮಾನ?

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‍ಸಿ)ದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತು ಮಾಡುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಶಿಫಾರಸು ಮಾಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಶಿವಶಂಕರಪ್ಪ ಸಾಹುಕಾರ್ ತಮ್ಮ ಪುತ್ರಿಯರಿಗೆ ಸರಕಾರಿ ಹುದ್ದೆ ದೊರಕುವಂತೆ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯಪಾಲರು ಅವರನ್ನು ಕೆಪಿಎಸ್‍ಸಿ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿದ್ದರು. ಇದರ ನಡುವೆ ಕೆಪಿಎಸ್‍ಸಿ ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲೂ ಪ್ರಶ್ನೆಪತ್ರಿಕೆ ಸೋರಿಕೆ, ಒಎಂಆರ್ ಉತ್ತರ ಪತ್ರಿಕೆಗಳ ತಿರುಚುವಿಕೆ ಹಾಗೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಹಣದ ವ್ಯವಹಾರ ನಡೆದಿರುವ ಆರೋಪಗಳು ಕೇಳಿಬಂದಿವೆ.
ಈ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಈ.ಡಿ.) ಅಕ್ರಮ ಹಣ ವರ್ಗಾವಣೆ ಸಂಬಂಧ ಕರ್ನಾಟಕ ರಾಜ್ಯವು ಸೇರಿದಂತೆ ವಿವಿಧೆಡೆ ಶೋಧ ನಡೆಸಿದ್ದು, ಸಾಹುಕಾರ್ ಅವರ ನಿವಾಸದಲ್ಲೂ ಶೋಧ ಕಾರ್ಯ ಕೈಗೊಂಡಿದ್ದರು ಎಂದು ವರದಿಯಾಗಿದೆ.
ಆದರೆ, ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸುವಾಗ ರಾಜ್ಯಪಾಲರು ರಾಜ್ಯ ಮಂತ್ರಿ ಮಂಡಲದ ಶಿಫಾರಸು ಅಥವಾ ಸಲಹೆಯನ್ನು ಪಡೆದಿಲ್ಲ ಎಂಬ ಕಾರಣವನ್ನು ಮುಂದಿಟ್ಟು, ಶಿವಶಂಕರಪ್ಪ ಅಮಾನತು ಆದೇಶವನ್ನು ಹೈಕೋರ್ಟ್ ರದ್ದು ಮಾಡಿತ್ತು. ಅಲ್ಲದೇ, ಏಳು ದಿನಗಳೊಳಗೆ ಅವರನ್ನು ಕೆಪಿಎಸ್‍ಸಿ ಅಧ್ಯಕ್ಷ ಸ್ಥಾನಕೆ ಮರು ನೇಮಕ ಮಾಡುವಂತೆ ನಿರ್ದೇಶನ ನೀಡಿತ್ತು.
ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರದ ಬಗ್ಗೆ ವಿವರವಾಗಿ ಚರ್ಚಿಸಿ, ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತು ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಇತರ ನಿರ್ಣಯಗಳು: ‘ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ-2026, ‘ಕರ್ನಾಟಕ ಕೈಗಾರಿಕೆಗಳು(ಅನುಕೂಲತೆ) (ತಿದ್ದುಪಡಿ) ವಿಧೇಯಕ-2026, ‘ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ವಿಧೇಯಕ-2026, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ, 2026ಕ್ಕೆ ಅನುಮೋದನೆ ನೀಡಲಾಗಿದೆ ಎಂದು ಹೇಳಲಾಗಿದೆ.
ಆಲಮಟ್ಟಿ ಅಣೆಕಟ್ಟಿಗೆ ಸ್ಕಿನ್ ಪ್ಲೇಟ್ಸ್ ಅಳವಡಿಸುವ ಬಗ್ಗೆ ಪ್ರಸಕ್ತ ಸಾಲಿನ ಮಾ.26ರಂದು ವಿಧಾನಪರಿಷತ್ ನಲ್ಲಿ ಅಂಗೀಕೃತವಾದ ನಿರ್ಣಯಕ್ಕೆ ಸಚಿವ ಸಂಪುಟ ಘಟನೋತ್ತರ ಅನುಮೋದನೆ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಆಪರೇಷನ್ ಶುದ್ದೀಕರಣ' ಅಡಿ ಅತ್ಯಾಧುನಿಕ ಭದ್ರತಾ ತಪಾಸಣಾ ಉಪಕರಣಗಳನ್ನು 20 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಸರಕಾರದ ಕಚೇರಿಗಳಲ್ಲಿ ನಡೆಯುವ ಕೇಂದ್ರ ವಲಯ/ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಮಾರ್ಗ ಸೂಚಿಗಳನ್ನು ಪಾಲಿಸುವ ಕುರಿತು ಹಾಗೂ ಕರ್ನಾಟಕ ವಿದ್ಯುತ್ ನಿಗಮ ಗ್ಯಾಸ್ ಪವರ್ ಅನ್ನು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ದಲ್ಲಿ ವಿಲೀನ ಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಸರಕಾರಿ ವೈದ್ಯಕೀಯ ಕಾಲೇಜು, ಹಾಸ್ಟೆಲ್, ವಸತಿ ಗೃಹ ನಿರ್ಮಾಣ ಮತ್ತು ಉಪಕರಣ ಹಾಗೂ ಪೂರಕ ಸೌಲಭ್ಯಗಳನ್ನು ಒದಗಿಸುವ ಒಟ್ಟು 574.79ಕೋಟಿ ರೂ. ಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.






