ಸರಕಾರದ ಪರ ಮಾತನಾಡಲು ವಕ್ತಾರರ ನೇಮಕ : ರಾಜ್ಯ ಸಚಿವ ಸಂಪುಟ ತೀರ್ಮಾನ
ʼಸರಕಾರಿ ಉದ್ಯಾನವನ ತಿದ್ದುಪಡಿ ವಿಧೇಯಕʼ ವಾಪಸ್ : ಜಿ.ಪರಮೇಶ್ವರ್

ಬೆಂಗಳೂರು : ರಾಜ್ಯ ಸರಕಾರದ ಪರ ಅಧಿಕೃತವಾಗಿ ಮಾತನಾಡಲು ಹಾಗೂ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ನೂತನವಾಗಿ ವಕ್ತಾರರನ್ನು ನೇಮಕ ಮಾಡಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು, ಸರಕಾರದ ಪರವಾಗಿ ಅಧಿಕೃತವಾಗಿ ಮಾತನಾಡಲು ಹಾಗೂ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ನನ್ನ ನೇತೃತ್ವದಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಯು.ಟಿ. ಖಾದರ್, ಈಶ್ವರ್ ಖಂಡ್ರೆ, ಹೆಚ್.ಸಿ. ಬಾಲಕೃಷ್ಣ ಮತ್ತು ಲಕ್ಷ್ಮಣ ಸವದಿ ಅವರನ್ನೊಳಗೊಂಡ ವಕ್ತಾರರ ಸಮಿತಿಯನ್ನು ರಚಿಸಲಾಗಿದೆ ಎಂದರು.
ಅದೇ ರೀತಿ, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉಪಮುಖ್ಯಮಂತ್ರಿ, ಕೆ.ಹೆಚ್.ಮುನಿಯಪ್ಪ, ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ, ಯು.ಟಿ. ಖಾದರ್, ಲಕ್ಷ್ಮಣ ಸವದಿ, ಸತೀಶ್ ಜಾರಕಿಹೊಳಿ ಹಾಗೂ ಎಂ.ಬಿ.ಪಾಟೀಲ್ ಅವರನ್ನೊಳಗೊಂಡ 'ರಾಜಕೀಯ ವ್ಯವಹಾರಗಳ ಸಮಿತಿ’ ರಚಿಸಲಾಗಿದೆ ಎಂದರು.
ಇನ್ನೂ, ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಉದ್ಯಾನವನ ತಿದ್ದುಪಡಿ ವಿಧೇಯಕ ವಾಪಸ್ ಕುರಿತು ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕ ಉಪಯೋಗಕ್ಕಾಗಿ ತರಲಾಗಿದ್ದ ಸರಕಾರಿ ಉದ್ಯಾನವನ ತಿದ್ದುಪಡಿ ವಿಧೇಯಕವನ್ನು ಸರಕಾರ ವಾಪಸ್ ಪಡೆದುಕೊಂಡಿದೆ. ವಿರೋಧ ಪಕ್ಷಗಳು ಈ ಕಾಯ್ದೆಯ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿಸಿ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಹೊಸ ರೂಪದಲ್ಲಿ ಇದನ್ನು ಮರು ಮಂಡಿಸಲಾಗುವುದು ಎಂದರು.






