ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿ 12 ಮಹತ್ವದ ಯೋಜನೆಗಳಿಗೆ ಸಂಪುಟ ಅನುಮೋದನೆ

ಬೆಂಗಳೂರು : ರಾಜ್ಯದಲ್ಲಿರುವ ಆದಿವಾಸಿ ಮತ್ತು ವಿಶೇಷವಾಗಿ ದುರ್ಬಲ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ ‘ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ’ ಸ್ಥಾಪನೆ ಸೇರಿದಂತೆ 12 ಮಹತ್ವದ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೇರೇಗೌಡ, ಅರಣ್ಯ ಮತ್ತು ಅರಣ್ಯಾಧಾರಿತ ಪ್ರದೇಶಗಳಲ್ಲಿ ವಾಸಿಸುವ ಇರುಳ, ಸೋಲಿಗ, ಜೇನುಕುರುಬ, ಕಾಡುಕುರುಬ, ಕುಡಿಯ, ಸಿದ್ಧಿ ಸೇರಿದಂತೆ ಇತರ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡುವುದು ಈ ನಿಗಮದ ಉದ್ದೇಶವಾಗಿದೆ ಎಂದರು.
ನಿಗಮದ ಮೂಲಕ ಬುಡಕಟ್ಟು ಸಮುದಾಯಗಳಿಗೆ ಆರ್ಥಿಕ ನೆರವು, ಉದ್ಯಮಶೀಲತೆ ಮತ್ತು ಕೌಶಲಾಭಿವೃದ್ಧಿ, ಮಾರುಕಟ್ಟೆ ಸಂಪರ್ಕ ಮತ್ತು ಜೀವನೋಪಾಯದ ಅವಕಾಶಗಳು, ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಹಾಗೂ ಬುಡಕಟ್ಟು ಜನರ ಸಾಂಪ್ರದಾಯಿಕ ಜೀವನೋಪಾಯಕ್ಕೆ ಬೆಂಬಲ ನೀಡುವ ಕ್ಷೇತ್ರಗಳಿಗೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ. ಈ ನಿಗಮದ ಸ್ಥಾಪನೆಗೆ ಒಟ್ಟು 33.36 ಕೋಟಿ ರೂ.ಅನುದಾನವನ್ನು ಒದಗಿಸಲು ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಬಿಎ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಸುಧಾರಿಸಲು ಪರಿಷ್ಕೃ ತ ಅಂದಾಜು ಮೊತ್ತಕ್ಕೆ ಸಂಪುಟ ಅನುಮೋದನೆ ನೀಡಿದೆ. ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ನಗರ ವಿಸ್ತರಣೆಯ ಹಿನ್ನೆಲೆಯಲ್ಲಿ ಘನ ತ್ಯಾಜ್ಯ, ದ್ರವ ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ, ಇ-ತ್ಯಾಜ್ಯ, ನಿರ್ಮಾಣ ತ್ಯಾಜ್ಯ ಹಾಗೂ ಜೈವಿಕ ವೈದ್ಯಕೀಯ ತ್ಯಾಜ್ಯಗಳ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ. ಈ ಯೋಜನೆಯಡಿ, ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವುದು, ದ್ರವ ತ್ಯಾಜ್ಯದ ನಿರ್ವಹಣೆ ಮತ್ತು ಸಂಸ್ಕರಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸುವುದು, ಇ-ತ್ಯಾಜ್ಯ ಹಾಗೂ ಅಪಾಯಕಾರಿ ತ್ಯಾಜ್ಯಗಳ ನಿರ್ವಹಣೆಯನ್ನು ಸುಧಾರಿಸುವುದು, ನಿರ್ಮಾಣ ಮತ್ತು ಕೆಡವುವಿಕೆಯಿಂದ ಉಂಟಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದು ಹಾಗೂ ಜೈವಿಕ ವೈದ್ಯಕೀಯ ಮತ್ತು ಇತರ ವಿಶೇಷ ತ್ಯಾಜ್ಯಗಳ ಸುರಕ್ಷಿತ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಎರಡು ನಗರ ಪಾಲಿಕೆಗಳ ಪ್ರದೇಶಗಳಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲು 1,494.70 ಕೋಟಿ ರೂಪಾಯಿ ವೆಚ್ಚದ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ. ನಗರದಲ್ಲಿ ಸ್ವಚ್ಛತೆ ಕಾಪಾಡುವುದು, ತ್ಯಾಜ್ಯ ವಿಲೇವಾರಿಯಿಂದ ಉಂಟಾಗುವ ಪರಿಸರ ಸಮಸ್ಯೆಗಳನ್ನು ಕಡಿಮೆ ಮಾಡುವುದು ಹಾಗೂ ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ರೂಪಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದೂ ಅವರು ತಿಳಿಸಿದರು.
ರಾಯಣ್ಣ ಸೈನಿಕ ಶಾಲೆ: ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯ ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ 228.95 ಕೋಟಿ ರೂ., ವೆಚ್ಚದ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಶಾಲೆಯಲ್ಲಿರುವ ಕಟ್ಟಡಗಳು, ಪ್ರಯೋಗಾಲಯಗಳು, ಗ್ರಂಥಾಲಯ, ಕ್ರೀಡಾ ಸೌಲಭ್ಯಗಳು ಹಾಗೂ ಇತರ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಈ ಅನುದಾನ ಬಳಕೆಯಾಗಲಿದೆ. 2022ರಿಂದ ಕಾರ್ಯಾರಂಭ ಮಾಡಿರುವ ಈ ಶಾಲೆಯಲ್ಲಿ 6ರಿಂದ 10ನೇ ತರಗತಿವರೆಗೆ ಒಟ್ಟು 540 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸೈನಿಕ ತರಬೇತಿಗೆ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.
ವಿಶೇಷ ತನಿಖಾ ತಂಡ ಅವಧಿ ವಿಸ್ತರಣೆ: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ರಚಿಸಿರುವ ವಿಶೇಷ ತನಿಖಾ ತಂಡದ ಕಾರ್ಯಾವಧಿಯನ್ನು ವಿಸ್ತರಿಸಲು ಸಂಪುಟ ನಿರ್ಧರಿಸಿದ್ದು, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆ, ಸಾಕ್ಷ್ಯ ಸಂಗ್ರಹ, ತಪ್ಪಿತಸ್ಥರ ಪತ್ತೆ ಹಾಗೂ ಕಾನೂನು ಕ್ರಮಗಳನ್ನು ಮುಂದುವರಿಸಲು ಉದ್ದೇಶಿಸಲಾಗಿದೆ. 2026ರ ಜುಲೈ 1ರಿಂದ ಒಂದು ವರ್ಷದ ಅವಧಿಗೆ ವಿಶೇಷ ತನಿಖಾ ತಂಡದ ಕಾರ್ಯಾವಧಿಯನ್ನು ಮುಂದುವರಿಸಲು ಅನುಮೋದನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಯೋಗಾಲಯ ಉಪಕರಣ ಖರೀದಿ: ರಾಜ್ಯದ ಸರಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳಲ್ಲಿ ರೋಗನಿರ್ಣಯ ಸೇವೆಗಳನ್ನು ಬಲಪಡಿಸಲು 21.11 ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಾಲಯ ಉಪಕರಣಗಳನ್ನು ಖರೀದಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಅದೇ ರೀತಿ, ಹುಬ್ಬಳ್ಳಿ ನಗರದಲ್ಲಿ ಸಮಗ್ರ ಕ್ರೀಡಾಂಗಣ ನಿರ್ಮಾಣ ಹಾಗೂ ನಿರ್ವಹಣೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ 20 ವರ್ಷಗಳ ಅವಧಿಗೆ ವಹಿಸಿಕೊಡಲು ನಿರ್ಧರಿಸಲಾಗಿದೆ. ನಗರದ 14.6 ಎಕರೆ ಪ್ರದೇಶದಲ್ಲಿ ಈ ಕ್ರೀಡಾಂಗಣ ನಿರ್ಮಾಣವಾಗಲಿದ್ದು, ವಿವಿಧ ಕ್ರೀಡೆಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ಅವರು ಹೇಳಿದರು.
ಜಲಸಂಗ್ರಹಾಗಾರ ನಿರ್ಮಾಣ: ಬೆಂಗಳೂರು ನಗರದಲ್ಲಿ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಎರಡು ಜಲಸಂಗ್ರಹಾಗಾರಗಳ ನಿರ್ಮಾಣಕ್ಕೆ ಒಟ್ಟು 61.50 ಕೋಟಿ ರೂ., ವೆಚ್ಚವಾಗಲಿದೆ. ಮೊದಲ ಯೋಜನೆಯ ಭಾಗವಾಗಿ ನಗರದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾವಲ್ಬೈರಸಂದ್ರ ಗ್ರಾಮದಲ್ಲಿ 22.50 ಕೋಟಿ ರೂ. ವೆಚ್ಚದಲ್ಲಿ 50 ಎಂಎಲ್ ಸಾಮಥ್ರ್ಯದ ಜಲಸಂಗ್ರಹಾಗಾರ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಎರಡನೆಯದಾಗಿ ಬನಶಂಕರಿ ಪ್ರದೇಶದಲ್ಲಿ 39 ಕೋಟಿ ರೂ. ವೆಚ್ಚದಲ್ಲಿ 22 ಎಂಎಲ್ ಸಾಮಥ್ರ್ಯದ ಜಲಸಂಗ್ರಹಾಗಾರ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಈ ಯೋಜನೆಗಳಿಂದ ಸಂಬಂಧಿತ ನಗರ ಪ್ರದೇಶಗಳ ನಿವಾಸಿಗಳಿಗೆ ಕುಡಿಯುವ ನೀರಿನ ಸರಬರಾಜು ಸುಧಾರಿಸಲಿದೆ ಎಂದು ಕೃಷ್ಣಭೈರೇಗೌಡ ವಿವರಿಸಿದರು.
ಬೆಂಗಳೂರು ನಗರ ಮತ್ತು ಅದರ ಸುತ್ತಮುತ್ತಲಿನ ನಗರ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಜಿಐಎಸ್ ಆಧಾರಿತ ಮಹಾಯೋಜನೆಯನ್ನು ರೂಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ 16.60 ಕೋಟಿ ರೂ. ವೆಚ್ಚ ಮಾಡಲು ನಿರ್ಧರಿಸಲಾಗಿದೆ. ನಗರ ಪ್ರದೇಶಗಳ ವೇಗದ ವಿಸ್ತರಣೆ, ಜನಸಂಖ್ಯೆಯ ಹೆಚ್ಚಳ ಮತ್ತು ಮೂಲಸೌಕರ್ಯಗಳ ಮೇಲಿನ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ನಗರ ಯೋಜನೆ ರೂಪಿಸುವುದು ಇದರ ಉದ್ದೇಶ. ಈ ಯೋಜನೆಯಡಿ, ನಗರ ಪ್ರದೇಶಗಳ ಭೌಗೋಳಿಕ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಅವರು ಹೇಳಿದರು.
ಬೆಂಗಳೂರು ನಗರದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ತ್ಯಾಜ್ಯನೀರಿನ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ. ಮಂಡಳಿಯ ವ್ಯಾಪ್ತಿಯಲ್ಲಿ ಚರಕನಹಳ್ಳಿ ಪ್ರದೇಶದಲ್ಲಿ 10 ಎಂಎಲ್ಡಿ ಸಾಮಥ್ರ್ಯದ ತ್ಯಾಜ್ಯನೀರಿನ ಸಂಸ್ಕರಣಾ ಘಟಕವನ್ನು 51.37 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಯೋಜನೆಯಡಿ ಈಗಿರುವ ವ್ಯವಸ್ಥೆಯ ಸಾಮಥ್ರ್ಯ ಮತ್ತು ಹೆಚ್ಚುತ್ತಿರುವ ತ್ಯಾಜ್ಯನೀರಿನ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಸಂಸ್ಕರಣಾ ಸೌಲಭ್ಯವನ್ನು ಬಲಪಡಿಸಲಾಗುತ್ತದೆ. ಪ್ರಸ್ತುತ ಪ್ರದೇಶದಲ್ಲಿ 40 ಎಂಎಲ್ಡಿ ಸಾಮಥ್ರ್ಯದ ಘಟಕದ ವ್ಯವಸ್ಥೆಯೂ ಇದ್ದು, ರಾಜಕಾಲುವೆಗಳು ಹಾಗೂ ಸಮರ್ಪಕ ತ್ಯಾಜ್ಯನೀರಿನ ಸಂಸ್ಕರಣೆಗೆ ಸಂಬಂಧಿಸಿದ ಅಗತ್ಯಗಳನ್ನು ಪೂರೈಸಲು ಹೆಚ್ಚುವರಿ ಘಟಕ ಸ್ಥಾಪಿಸುವ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.
ಪ್ರಸ್ತುತ ಜಾರಿಯಲ್ಲಿರುವ ಲೋಕಾಯುಕ್ತ ಸಂಸ್ಥೆಯ ವೃಂದ ಮತ್ತು ನೇಮಕಾತಿ ನಿಯಮಗಳು ಸುಮಾರು 40 ವರ್ಷಗಳಷ್ಟು ಹಳೆಯದಾಗಿವೆ. ಆಡಳಿತಾತ್ಮಕ ಅಗತ್ಯಗಳು ಮತ್ತು ಬದಲಾಗಿರುವ ಸೇವಾ ಪರಿಸ್ಥಿತಿಗಳಿಗೆ ಅನುಗುಣವಾಗಿ ನಿಯಮಗಳನ್ನು ನವೀಕರಿಸುವ ಅಗತ್ಯವಿದೆ ಎಂಬುದನ್ನು ಸರಕಾರ ಗುರುತಿಸಿದ್ದು, ಪರಿಷ್ಕೃತ ಕರ್ನಾಟಕ ಲೋಕಾಯುಕ್ತ (ಅಧಿಕಾರಿಗಳು ಮತ್ತು ನೌಕರರ ವೃಂದ ಮತ್ತು ನೇಮಕಾತಿ ಹಾಗೂ ಸೇವಾ ಷರತ್ತುಗಳು) ನಿಯಮಗಳು, 2026ಕ್ಕೆ ಅನುಮೋದನೆ ನೀಡಲಾಗಿದೆ ಎಂದರು.
ಪ್ರಾಜೆಕ್ಟ್ ಕೆ-ಮಾನಿಟರ್: ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸರಕಾರಿ ಯೋಜನೆಗಳ ಮೇಲ್ವಿಚಾರಣೆಗೆ ‘ಪ್ರಾಜೆಕ್ಟ್ ಕೆ-ಮಾನಿಟರ್’ ಯೋಜನೆಯನ್ನು ಅನುಷ್ಠಾನಗೊಳಿಸಲು 14 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಸರಕಾರಿ ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸುವುದು, ಯೋಜನೆಗಳಿಂದ ಸಾರ್ವಜನಿಕರಿಗೆ ದೊರೆಯುತ್ತಿರುವ ಪ್ರಯೋಜನಗಳನ್ನು ಅಳೆಯುವುದು, ವಿವಿಧ ಇಲಾಖೆಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
9 ಸಾವಿರ ಮಹಿಳೆಯರಿಗೆ ಸಿಗಲಿದೆ ಹೊಲಿಗೆ ಯಂತ್ರ: ‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ನಿಗಮಗಳ ಮೂಲಕ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ನೆರವಾಗುವ ಉದ್ದೇಶದಿಂದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸುವ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ಯೋಜನೆಗೆ ಒಟ್ಟು 16.04 ಕೋಟಿ ರೂ., ವೆಚ್ಚವಾಗಲಿದ್ದು, ಒಟ್ಟು 9,243 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲು ರಾಜ್ಯ ಸರಕಾರ ಮುಂದಾಗಿದೆ’






