ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚನೆ, ಮಲ್ಪೆನಲ್ಲಿ ಬಹುಮಹಡಿ ಪಾರ್ಕಿಂಗ್ ಸೌಲಭ್ಯ: ಸಂಪುಟ ಒಪ್ಪಿಗೆ

ಈಶ್ವರ್ ಖಂಡ್ರೆ
ಬೆಂಗಳೂರು : ಬೌದ್ಧ ಕೇಂದ್ರ ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚನೆ, ಉಡುಪಿಯ ಮಲ್ಪೆ ಬಂದರಿನಲ್ಲಿ ಬಹುಮಹಡಿ ಪಾರ್ಕಿಂಗ್ ಸೌಲಭ್ಯ ಸೇರಿದಂತೆ ವಿವಿಧ ಹೊಸ ಕಾಮಗಾರಿಗಳಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ, ಐತಿಹಾಸಿಕ ಪ್ರಾಚೀನ ಬೌದ್ಧ ಕೇಂದ್ರವಾಗಿರುವ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತಿಯ ಅಭಿವೃದ್ಧಿಗಾಗಿ ‘ಸನ್ನತಿ ಅಭಿವೃದ್ಧಿ ಪ್ರಾಧಿಕಾರ’ ರಚಿಸಲು ಸಂಪುಟ ಅನುಮೋದನೆ ನೀಡಿದೆ. ಇಲ್ಲಿ ಅಶೋಕನ ಶಾಸನಗಳು ಹಾಗೂ ಬೌದ್ಧಕಾಲದ ಅವಶೇಷಗಳಿರುವುದು ಮತ್ತೊಂದು ವಿಶೇಷ. ಹೀಗಾಗಿ, ದೇಶ, ವಿದೇಶಗಳಿಂದ ಆಗಮಿಸುವ ಯಾತ್ರಾರ್ಥಿಗಳು ಮತ್ತು ಪ್ರವಾಸಿಗಳು ಈ ಸ್ಥಳಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಈ ಕೇಂದ್ರದ ಅಭಿವೃದ್ಧಿಗಾಗಿ ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ವಿಧೇಯಕ ಸಹ ಮಂಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಬಜೆಟ್ನಲ್ಲಿ ಘೋಷಣೆ ಮಾಡಿರುವಂತೆ ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ 1800 ಚದರ ಮೀಟರ್ ವಿಸ್ತೀರ್ಣದ ಜಾಗದಲ್ಲಿ ಬಹು ಮಹಡಿ ವಾಹನ ನಿಲುಗಡೆ ಸೌಲಭ್ಯ ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ಇದಕ್ಕಾಗಿ 8.43 ಕೋಟಿ ರೂ. ಹೂಡಿಕೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಅದೇ ರೀತಿ,ಮುದ್ದೇಬಿಹಾಳ ಮತ್ತು ಕಂಪಿ ್ಲಹೋಬಳಿಯ ಹರಳಹಳ್ಳಿಯಲ್ಲಿ ಒಟ್ಟು 26.10 ಕೋಟಿ ರೂ. ವೆಚ್ಚದಲ್ಲಿ ನೂತನ ಕೈಗಾರಿಕಾ ವಸಾಹತುಗಳನ್ನು ನಿರ್ಮಾಣಕ್ಕೆ, ಮಲೈಮಹದೇಶ್ವರ ವನ್ಯಜೀವಿ ವಿಭಾಗದ ಪಿ.ಜಿ. ಪಾಳ್ಯ ವನ್ಯಜೀವಿವಲಯದಲ್ಲಿ ಪಿ.ಜಿ.ಪಾಳ್ಯದಿಂದ ಕುಡುವಲೆಕ್ರಾಸ್ ವರೆಗೆ 10.60 ಕಿ.ಮೀ. ಉದ್ದದ ರೈಲ್ವೆಬ್ಯಾರಿಕೇಡ್ ನಿರ್ಮಿಸಲು ಸಂಪುಟದ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಇದರಿಂದ ಸುಮಾರು 2,942 ರೈತ ಕುಟುಂಬಗಳಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಐಇಸಿ ಚಟುವಟಿಕೆಗಳ 28.01 ಕೋಟಿ ರೂ.ವೆಚ್ಚದ ಸಮಗ್ರ ಕ್ರಿಯಾ ಯೋಜನೆ. ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಹಾಗೂ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಒಟ್ಟು 40 ಕೋಟಿ ರೂ.ಅಂದಾಜು ವೆಚ್ಚದಲ್ಲಿ ರೊಬೂಟಿಕ್ ಶಸ್ತ್ರ ಚಿಕಿತ್ಸೆ ಉಪಕರಣ ಖರೀದಿಗೆ ಅನುಮೋದನೆ ನೀಡಲಾಗಿದೆ. ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ 42 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಸಿದ್ಧಾರೂಢನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯ ಪುನರ್ ನಿರ್ಮಾಣ ಮಾಡಲಾಗುವುದು.ಕಾಳಗಿ ತಾಲೂಕಿನ ರಾಜ್ಯಹೆದ್ದಾರಿ 125 ರಲ್ಲಿ ಬೆಣ್ಣೆತೊರಾಗೆ ಅಡ್ಡಲಾಗಿ ಕನ್ಸೂರು ಬಳಿ 21 ಕೋಟಿ ರೂ. ವೆಚ್ಚದಲ್ಲಿ ಎತ್ತರಿಸಿದ ಸಂಪರ್ಕ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದಿಸಲಾಗಿದೆ ಎಂದರು.
ಶಿವಮೊಗ್ಗ ನಗರದಲ್ಲಿರುವ ಬಾಗಲಕೋಟೆ-ಬಿಳಿಗಿರಿರಂಗನ ಬೆಟ್ಟ ರಾಜ್ಯಹೆದ್ದಾರಿ 57 ರಲ್ಲಿರುವ ಹಳೆಯ ತುಂಗಾ ಸೇತುವೆಯು ಶಿಥಿಲಗೊಂಡಿದ್ದು, 40 ಕೋಟಿ ರೂ. ವೆಚ್ಚದಲ್ಲಿ ಮರು ನಿರ್ಮಾಣ ಮಾಡಲು ಹಾಗೂ ಸಣ್ಣನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಚಿತ್ರದುರ್ಗಜಿಲ್ಲೆ ಹಿರಿಯೂರು ತಾಲೂಕುವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಏತ ನೀರಾವರಿ ಕಾಮಗಾರಿಯನ್ನು 35 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು, ಚಳ್ಳಕೆರೆ ನಗರ ಸಭೆ ವ್ಯಾಪ್ತಿಯಲ್ಲಿ ಹೊಸ ವಾಣಿಜ್ಯ ಸಂಕೀರ್ಣ ಕಾಮಗಾರಿಗಳಿಗೆ 35.04 ಕೋಟಿ ರೂ.ವೆಚ್ಚ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ರಹೀಂ ಖಾನ್, ಶಾಸಕ ಟಿ.ಡಿ.ರಾಜೇಗೌಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.






