‘ಆನೇಕಲ್-ಸರ್ಜಾಪುರ-ವರ್ತೂರು-ವಿಮಾನ ನಿಲ್ದಾಣ-ನೆಲಮಂಗಲ ರಸ್ತೆ’ : 1,118 ಕೋಟಿ ರೂ.ಹೆಚ್ಚುವರಿ ಅನುದಾನ ಬಿಡುಗಡೆಗೆ ಸಂಪುಟ ಒಪ್ಪಿಗೆ

ಬೆಂಗಳೂರು : ಆನೇಕಲ್-ಸರ್ಜಾಪುರ-ವರ್ತೂರು-ವಿಮಾನನಿಲ್ದಾಣ-ನೆಲಮಂಗಲ ರಸ್ತೆ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಅಗತ್ಯವಿದ್ದ 1118.50 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಮಂಜೂರುಗೊಳಿಸಲು ಗುರುವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ನಿರ್ಧರಿಸಿದೆ.
ಬೆಂಗಳೂರು ನಗರದ ಸುತ್ತಮುತ್ತಲಿನ ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಲಿರುವ 134 ಕಿ.ಮೀ. ಉದ್ದದ ಅತ್ತಿಬೆಲೆ-ಸರ್ಜಾಪುರ-ದೊಮ್ಮಸಂದ್ರ-ಗುಂಜೂರು-ವರ್ತೂರು-ವೈಟ್‍ಫೀಲ್ಡ್-ವಿಮಾನನಿಲ್ದಾಣ-ನೆಲಮಂಗಲ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಈ ಹೆಚ್ಚುವರಿ ಅನುದಾನ ಅಗತ್ಯವಾಗಿತ್ತು.
ಕೆಆರ್‍ಡಿಎಲ್ ವತಿಯಿಂದ ಕೈಗೊಂಡಿದ್ದ ಈ ಪ್ರಮುಖ ರಸ್ತೆ ಯೋಜನೆಯು 2017ರಲ್ಲೇ ಮಂಜೂರಾಗಿತ್ತು. ಆಗ ಯೋಜನೆಯ ವೆಚ್ಚವನ್ನು 2,290.50 ಕೋಟಿ ರೂ.ಗಳಿಗೆ ಅಂದಾಜಿಸಲಾಗಿತ್ತು. ಆದರೆ, ಪ್ರಸ್ತುತ ಯೋಜನೆಯ ಒಟ್ಟು ವೆಚ್ಚವು 3,409 ಕೋಟಿ ರೂ.ಗಳಿಗೆ ಪರಿಷ್ಕರಣೆಯಾಗಿದೆ. ಭೂಸ್ವಾಧೀನ ವೆಚ್ಚದಲ್ಲಿನ ಏರಿಕೆ, ಬೆಲೆ ಏರಿಕೆ, ವಿಳಂಬ ಹಾಗೂ ಕಾಮಗಾರಿ ಅನುಷ್ಠಾನದ ವೇಳೆ ಸೇರ್ಪಡೆಯಾದ ಹೆಚ್ಚುವರಿ ಕೆಲಸಗಳು ಯೋಜನಾ ವೆಚ್ಚ ಹೆಚ್ಚಾಗಲು ಮುಖ್ಯ ಕಾರಣಗಳಾಗಿವೆ.
ಅದರಲ್ಲೂ ಪ್ರಮುಖವಾಗಿ ಸಂಪುಟ ಸಮಿತಿ ಮಂಜೂರು ಮಾಡಿರುವ ಹೆಚ್ಚುವರಿ 1118.50 ಕೋಟಿ ರೂ. ಮೊತ್ತದ ಪೈಕಿ 266.83 ಕೋಟಿ ರೂ. ಮೊತ್ತವನ್ನು ಭೂ ಸ್ವಾಧೀನ ಪ್ರಕ್ರಿಯೆಗೆ ಹಾಗೂ 347.54 ಕೋಟಿ ರೂ. ಮೊತ್ತ ದರ ಹೊಂದಾಣಿಕೆ ವೆಚ್ಚಕ್ಕೆ ಖರ್ಚಾಗಲಿದೆ.
ನಗರದ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಪ್ರಯಾಣದ ಅಗತ್ಯಗಳನ್ನು ಮನಗಂಡು, ಈ ಯೋಜನೆಯನ್ನು ಪೂರ್ಣಗೊಳಿಸಲು ಸಚಿವ ಸಂಪುಟವು ಹೆಚ್ಚುವರಿ ನಿಧಿಯನ್ನು ಮಂಜೂರು ಮಾಡಿದೆ. ಅಲ್ಲದೆ, ಕಾಮಗಾರಿ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಂಪುಟವು, ಬಾಕಿ ಇರುವ ಕಾಮಗಾರಿಯನ್ನು ಅತ್ಯಂತ ಶೀಘ್ರದಲ್ಲೇ ಮುಕ್ತಾಯಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಅನೇಕಲ್-ಸರ್ಜಾಪುರ-ವರ್ತೂರು-ವಿಮಾನನಿಲ್ದಾಣ-ನೆಲಮಂಗಲ ರಸ್ತೆ ಅಭಿವೃದ್ಧಿ ಯೋಜನೆಯು ಈ ಭಾಗದ ಸವಾರ್ಂಗೀಣ ಪ್ರಗತಿಗೆ ಮುನ್ನುಡಿ ಬರೆಯಲಿದ್ದು, ಇದರ ಮೂಲಕ ಸ್ಥಳೀಯವಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಸಾಕಾರಗೊಳ್ಳಲಿವೆ. ಈ ಬೃಹತ್ ಸಂಪರ್ಕ ಜಾಲವು ಹೊಸಕೋಟೆ ಹಾಗೂ ನೆಲಮಂಗಲದಿಂದ ವಿಮಾನ ನಿಲ್ದಾಣದವರೆಗೆ ಮತ್ತು ಬಿಡದಿಯಿಂದ ವರ್ತೂರು ಮಾರ್ಗವಾಗಿ ಸರ್ಜಾಪುರಕ್ಕೆ ಅತ್ಯುತ್ತಮ ಹಾಗೂ ಸುಲಭ ಸಂಪರ್ಕ ಕಲ್ಪಿಸಲಿದೆ.
ವಾಹನ ದಟ್ಟಣೆ ಅಧಿಕವಾಗಿರುವ ವರ್ತೂರು ಭಾಗದಲ್ಲಿ ದೀರ್ಘಕಾಲದ ಟ್ರಾಫಿಕ್ ಸಮಸ್ಯೆಗೆ ಗಣನೀಯ ಪರಿಹಾರ ಕಲ್ಪಿಸುವ ಸಲುವಾಗಿ, ಈ ಯೋಜನೆಯ ಭಾಗವಾಗಿ ವರ್ತೂರಿನಲ್ಲಿ 1.92 ಕಿ.ಮೀ. ವ್ಯಾಪ್ತಿಯ ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾಗಲಿದೆ. ಗೊಲ್ಲಹಳ್ಳಿ, ಬಸವನಹಳ್ಳಿ, ರಾಜಾನುಕುಂಟೆ, ನಾರಾಯಣಪುರ, ಕಾಡುಗೋಡಿ ಹಾಗೂ ವರ್ತೂರು ಜಂಕ್ಷನ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ರೈಲ್ವೆ ಕ್ರಾಸಿಂಗ್ ಫ್ಲೈಓವರ್‍ಗಳು ನಿರ್ಮಾಣಗೊಳ್ಳಲಿವೆ.
‘ನಾನು ಖುದ್ದಾಗಿ ಈ ರಸ್ತೆಯ ಸ್ಥಳ ಪರಿಶೀಲನೆ ನಡೆಸಿದ ಬಳಿಕ, ಯೋಜನೆಯ ಶೀಘ್ರ ಪೂರ್ಣಗೊಳಿಸುವಿಕೆಗೆ ಹೆಚ್ಚುವರಿ ನಿಧಿಯ ಅಗತ್ಯದ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದೆ. ಇದೀಗ 1118ಕೋಟಿ ರೂ.ಹೆಚ್ಚುವರಿ ಅನುದಾನ ಮಂಜೂರಾಗಿರುವುದರಿಂದ ಕಾಮಗಾರಿ ವೇಗ ಪಡೆಯಲಿದೆ. ಲೋಕೋಪಯೋಗಿ ಸಚಿವರು ಹಾಗೂ ಇಲಾಖೆಯ ಸಹಕಾರದೊಂದಿಗೆ ಈ ಭಾಗದ ಪ್ರಯಾಣಿಕರಿಗೆ ಶೀಘ್ರದಲ್ಲೇ ಸುಲಭ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು. ನನ್ನ ಮನವಿಗೆ ಸ್ಪಂದಿಸಿದ ಸಂಪುಟ ಸಭೆ ಹಾಗೂ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಧನ್ಯವಾದಗಳು.
-ಕೃಷ್ಣ ಬೈರೇಗೌಡ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ






