ಸಂಪುಟ ಪುನರ್ ರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ: ಗೃಹ ಸಚಿವ ಡಾ. ಜಿ. ಪರಮೇಶ್ವರ್

ಹುಬ್ಬಳ್ಳಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ ಹಾಗೂ ಅವರ ವಿವೇಚನೆಗ ಬಿಟ್ಟಿರುವ ವಿಚಾರ. ಸೂಕ್ತ ಸಂದರ್ಭದಲ್ಲಿ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಆಯ್ಕೆಯಾಗಿರುವ ಎಲ್ಲಾ ಶಾಸಕರಿಗೂ ಮಂತ್ರಿಗಳಾಬೇಕು ಎನ್ನುವ ಆಸೆಯಿರುತ್ತದೆ. ನಾನು ಮುಖ್ಯಮಂತ್ರಿ ಆಗಬಾರದಾ ? ಎಂದ ಅವರು, ಮುಖ್ಯಮಂತ್ರಿಗಳು, ಸಚಿವರು ಔತಣಕೂಟ ಕರೆಯುವುದು ಸಾಮಾನ್ಯ. ಇನ್ನು ಸೋಮವಾರ ಊಟಕ್ಕೆ ಕರೆದಿದ್ದಾರೆ ಎನ್ನುವುದಕ್ಕೆ ಮಹತ್ವ ಕೊಡಬೇಕಾಗಿಲ್ಲ. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು, ಸಚಿವರು ಊಟಕ್ಕೆ ಕರೆದು ಒಂದು ಸಭೆ ಮಾಡಿದರೆ ದೊಡ್ಡ ವಿಚಾರ ಎಂದು ತಿಳಿದಿರುವುದು ಬಿಜೆಪಿಯವರ ಮನಸ್ಥಿತಿಯಿಂದಾಗಿ. ಬಿಜೆಪಿಯವರು ಎಲ್ಲದರಲ್ಲೂ ರಾಜಕಾರಣ ಹುಡುಕುತ್ತಾರೆ ಎಂದರು.
ಪಿ.ಎಸ್.ಐಗಳ ಅಂತರ ವಲಯ ವರ್ಗಾವಣೆಗೆ ಸಂಬಂಧಿಸಿದ ಆಯಾ ವಲಯದ ಐಜಿಪಿಗಳು ಶಿಫಾರಸ್ಸು ಮಾಡುತ್ತಾರೆ. ಅದನ್ನು ಪೊಲೀಸ್ ಮಹಾನಿರ್ದೇಶಕರು ಪರಿಗಣಿಸಿ ವರ್ಗಾವಣೆ ಮಾಡಿಕೊಡುತ್ತಾರೆ . ನಾವು ಅಧಿಕಾರಕ್ಕೆ ಬಂದ ನಂತರ ಅಂತಹ ಸಮಸ್ಯೆಯಾಗಿಲ್ಲ. ಹಿಂದಿನ ಸರಕಾರವು ಪೊಲೀಸ್ ಇನ್ಸ್‌ಪೆಕ್ಟರ್ (ಸಿಪಿಐ) ಗಳನ್ನು ಒಂದೇ ವರ್ಷಕ್ಕೆ ವರ್ಗಾವಣೆ ಮಾಡುತ್ತಿದ್ದರು. ನಾವು ಅಧಿಕಾರಿಕ್ಕೆ ಬಂದ ನಂತರ ಅದನ್ನು ಎರಡು ವರ್ಷಕ್ಕೆ ಹೆಚ್ಚಿಸಿದ್ದೇವೆ ಎಂದರು.
ಒಳಮೀಸಲಾತಿ ವಿಚಾರದಲ್ಲಿನಿರ್ಧಾರ ಕೈಗೊಂಡು ಸರಕಾರಿ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳಿಂದ ಆದೇಶ ಬಂದಿದೆ. ನಮ್ಮ ಇಲಾಖೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಸೇರಿದಂತೆ ಸುಮಾರು 15,000 ಹುದ್ದೆಗಳು ಖಾಲಿಯಿವೆ. ಈಗಾಗಲೇ 4000 ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಹೊಸದಾಗಿ 600 ಪಿ.ಎಸ್.ಐ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಎರಡು ವರ್ಷ ನೇಮಕಾತಿ ಪ್ರಕ್ರಿಯೆ ಇಲ್ಲದ ಕಾರಣ ಅಭ್ಯರ್ಥಿಗಳಿಗೆ ವಯೋಮಿತಿ ಕಾರಣ ಉದ್ಯೋಗದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಮೂರು ವರ್ಷ ಹೆಚ್ಚಿಗೆ ನೀಡಲಾಗಿದೆ ಎಂದರು.







