ರಾಜ್ಯಸಭೆ-ವಿಧಾನ ಪರಿಷತ್ ಚುನಾವಣೆ: ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳಿಂದ ಉಮೇದುವಾರಿಕೆ ಸಲ್ಲಿಕೆ

ಬೆಂಗಳೂರು: ರಾಜ್ಯಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಯಾಗಿ ಪ್ರೊ.ಎಂ.ನಾಗರಾಜ್, ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ ನಾಮಪತ್ರ ಸಲ್ಲಿಕೆ ಮಾಡಿದರೆ, ಇತ್ತ ಜೆಡಿಎಸ್ ಅಭ್ಯರ್ಥಿಯಾಗಿ ಗೋವಿಂದ ರಾಜ್ ಹಾಗೂ ಕಾಂಗ್ರೆಸ್‍ನಿಂದ ವಿನಯ್ ಕಾರ್ತಿಕ್ ಪ್ರಕಾಶ್ ಅವರು ಉಮೇದುವಾರಿಕೆ ಸಲ್ಲಿಕೆ ಮಾಡಿದರು.
ಸೋಮವಾರ ವಿಧಾನಸೌಧದಲ್ಲಿ ವಿಧಾನಸಭೆಯ ಕಾರ್ಯದರ್ಶಿಯೂ ಆಗಿರುವ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಡಾ.ಅಶ್ಚತ್ಥ್ ನಾರಾಯಣ್ ಸೇರಿ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದರು.
ಅದೇ ರೀತಿ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಚಿವ ಭೈರತಿ ಸುರೇಶ್, ಪರಿಷತ್ತಿನ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್ ಪ್ರಕಾಶ್ ನಾಮಪತ್ರ ಸಲ್ಲಿಕೆ ಮಾಡಿದರು. ಹಾಗೆಯೇ, ಜೆಡಿಎಸ್ ಶಾಸಕ ವೆಂಕಟಶಿವರೆಡ್ಡಿ ಅವರ ನಿಯೋಗದೊಂದಿಗೆ ಜೆಡಿಎಸ್ ಅಭ್ಯರ್ಥಿ ಗೋವಿಂದ ರಾಜ್ ನಾಮಪತ್ರ ಸಲ್ಲಿಸಿದರು.
ಕೊನೆ ಕ್ಷಣದ ಬೆಳವಣಿಗೆ ಎಂಬಂತೆ ಜೆಡಿಎಸ್ ಪಕ್ಷವು ಗೋವಿಂದ ರಾಜ್ ಅವರನ್ನು ಪರಿಷತ್ತಿನ ಎಂಟನೆ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಕಾಂಗ್ರೆಸ್ ವಿನಯ್ ಕಾರ್ತಿಕ್ ಅವರನ್ನು ಐದನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಹೀಗಾಗಿ ಒಂದು ಸ್ಥಾನಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಲಿದೆ. ಇತ್ತ ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲಲಿದೆ. ಏಳನೆ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಗೆ ಪಕ್ಷೇತರರು ಹಾಗೂ ಇಬ್ಬರು ಉಚ್ಛಾಟಿತ ಬಿಜೆಪಿ ಶಾಸಕರ ಬೆಂಬಲದ ಅಗತ್ಯತೆ ಇದೆ.
ಇತ್ತ ಜೆಡಿಎಸ್ ಅಭ್ಯರ್ಥಿಗೆ ಆರೇಳು ಮತಗಳ ಕೊರತೆ ಬರಲಿದೆ. ಬಿಜೆಪಿ ತನ್ನ ಎರಡು ಅಭ್ಯರ್ಥಿಗಳಿಗೆ ತಲಾ 29 ಪ್ರಥಮ ಪ್ರಾಶಸ್ತ್ರದ ಮತ ಹಾಕಲಿದೆ. ಬಳಿಕ ಬಿಜೆಪಿಯ 4 ಮತಗಳು ಉಳಿಯಲಿವೆ. ಇತ್ತ ಜೆಡಿಎಸ್‍ನ 18 ಮತಗಳು ಇರಲಿದೆ. ಜೆಡಿಎಸ್ ಅಭ್ಯರ್ಥಿಗೆ ಮೈತ್ರಿ ಪಕ್ಷದ 22 ಮತಗಳು ಬೀಳಲಿದ್ದು, ಆರು ಮತಗಳು ಕೊರತೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಮಂಗಳವಾರ(ಜೂ.9) ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜೂ.11ರಂದು (ಗುರುವಾರ) ಕೊನೆಯ ದಿನವಾಗಿದೆ. ಅಗತ್ಯವಿದ್ದರೆ ಜೂ.18ರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಮತದಾನ ನಡೆದು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.
ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯಸಭೆ ಹಾಗೂ ಪರಿಷತ್ ಚುನಾವಣೆಗೆ ಸಮರ್ಥ ಅಭ್ಯರ್ಥಿಗಳನ್ನೇ ಪಕ್ಷದ ವರಿಷ್ಠರು ಆಯ್ಕೆ ಮಾಡಿದ್ದಾರೆ. ಈ ಆಯ್ಕೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಂತಸ ತಂದಿದೆ. ರಾಜ್ಯಸಭೆಗೆ ಸುಮಲತಾ ಅಂಬರೀಶ್ ಅವರ ಹೆಸರು ಪ್ರಸ್ತಾಪವಾಗಿತ್ತು. ಈ ಹಿಂದೆ ಮಂಡ್ಯದಿಂದ ಅವರು ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದಾಗ ಬಿಜೆಪಿ ಬೆಂಬಲ ನೀಡಿತ್ತು. ಒಳ್ಳೆಯ ಅಂತರದಿಂದ ಗೆಲುವು ಸಾಧಿಸಿದ್ದರು. ಕಳೆದ ಚುನಾವಣೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಕ್ಷೇತ್ರ ಬಿಟ್ಟು ಕೊಟ್ಟಿದ್ದಾರೆ. ಸುಮಲತಾ ಅವರಿಗೆ ಮುಂದೆ ಸೂಕ್ತ ಸ್ಥಾನಮಾನ ಕೊಡಲಾಗುವುದು ಎಂದರು.
‘ರಾಜಕಾರಣದಲ್ಲಿ ಚದುರಂಗದ ಆಟ ಆಡುವಾಗ ಯಾರಾದರು ಯಾವ ರೀತಿ ಬದಲಾವಣೆ ಮಾಡುತ್ತಾರೆ ಎಂದು ಹೇಳುತ್ತಾರೆಯೇ?. ಯಾರು ಹೇಳುವುದಿಲ್ಲ’
-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ






