ಡಾ.ರಾಜಕುಮಾರ್ ಸಮಾಧಿ ವಿಚಾರವಾಗಿ ವಿವಾದಾತ್ಮಕ ಪೋಸ್ಟ್; ನಟ ಚೇತನ್ ವಿರುದ್ಧ ಪ್ರಕರಣ ದಾಖಲು

ನಟ ಚೇತನ್
ಬೆಂಗಳೂರು : ಡಾ.ರಾಜಕುಮಾರ್ ಸಮಾಧಿ ವಿಚಾರವಾಗಿ ವಿವಾದಾಸ್ಪದ ಬರಹವೊಂದನ್ನು ಹಂಚಿಕೊಂಡಿದ್ದ ನಟ ಚೇತನ್ ಅಹಿಂಸಾ ವಿರುದ್ಧ ಇಲ್ಲಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಾ.ರಾಜ್ಕುಮಾರ್ ಸೇನೆಯ ನಿಯೋಗ ಶನಿವಾರ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದ್ದು, ಈ ಬಗ್ಗೆ ನಟ ಚೇತನ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎ.24ರಂದು ಡಾ.ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ನಟ ಚೇತನ್, ‘ಒಬ್ಬ ನಟನ ಸಮಾಧಿಗೆ 2.5 ಎಕರೆ ಜಾಗ ನೀಡುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದ್ದರು.
‘ನಾವು ರಾಜಕುಮಾರ್ ಅವರನ್ನು ಒಬ್ಬ ಮಹಾನ್ ಕಲಾವಿದರಾಗಿ ಗೌರವಿಸುತ್ತೇವೆ. ಆದರೆ, ಬೆಂಗಳೂರು ನಗರ ಮಧ್ಯದಲ್ಲಿ 2006ರಲ್ಲಿ ಒಬ್ಬ ನಟನ ಸಮಾಧಿ ಕಾಂಪ್ಲೆಕ್ಸ್ ಗಾಗಿ 2.5 ಎಕರೆ ಭೂಮಿಯನ್ನು ನೀಡುವುದು ತಿಳುವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ’ ಎಂದು ಎಂದು ಹೇಳಿದ್ದರು.
‘21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರಕಾವು ಅದನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಉಪಯೋಗಕ್ಕೆ ತಕ್ಕಂತೆ ಹಂಚಬೇಕು. ಮತಗಳ ಲಾಭದ ಅವಕಾಶವಾದಿ ಉದ್ದೇಶದಿಂದ ಅಲ್ಲ’ ಎಂದು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದರು.
ನಟ ಚೇತನ್ ಅವರ ಈ ಪೋಸ್ಟ್ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೆ, ರಾಜ್ಕುಮಾರ್ ಅಭಿಮಾನಿಗಳನ್ನು ಕೆರಳಿಸಿತ್ತು. ಸದ್ಯ, ನಟ ಚೇತನ್ ರಾಜ್ಕುಮಾರ್ ಅಭಿಮಾನಿಗಳಿಗೆ ಅವಮಾನ ಮಾಡಿದ್ದಾರೆ. ನಮಗೆ ನೋವಾಗಿದ್ದು, ನಟನಿಂದ ಸಾರ್ವಜನಿಕವಾಗಿ ಕ್ಷಮೆ ಕೇಳಿಸಬೇಕು. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.






