ಸ್ಯಾಟಲೈಟ್ ರಿಂಗ್ ರಸ್ತೆ ಯೋಜನೆಗೆ ಕೇಂದ್ರ ಸರಕಾರದ ಅನುಮೋದನೆ : ಸಂಸದ ಡಾ.ಸಿ.ಎನ್.ಮಂಜುನಾಥ್

ಬೆಂಗಳೂರು : ನಾಲ್ಕೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸ್ಯಾಟಲೈಟ್ ರಿಂಗ್ ರಸ್ತೆ ಯೋಜನೆಯ ಕಾಮಗಾರಿಗೆ ಚಾಲನೆ ನೀಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸಂಸದ ಡಾ.ಸಿ.ಎನ್.ಮಂಜುನಾಥ್ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಈ ಕಾಮಗಾರಿಗೆ ಅನುಮೋದನೆ ನೀಡಲು ಮನವಿ ಸಲ್ಲಿಸಿದ್ದರು.
ಇದಕ್ಕೆ, ಸಕಾರಾತ್ಮಕವಾಗಿ ಸ್ಪಂದಿಸಿದ ನಿತಿನ್ ಗಡ್ಕರಿ, 45 ದಿನಗಳಲ್ಲಿ ಕಾಮಗಾರಿ ಪ್ರಾರಂಭ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ 4,750 ಕೋಟಿ ರೂ. ಅಂದಾಜಿನ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆಗೆ ಟೆಂಡರ್ ಪ್ರಕ್ರಿಯೆಗೆ ಅನುಮೋದನೆ ನೀಡಲಾಗಿದೆ ಎಂದು ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಪ್ರಮುಖ ಮೂಲಸೌಕರ್ಯ ಯೋಜನೆಯು ಬೆಂಗಳೂರು ನಗರ, ಗ್ರಾಮೀಣ ಮತ್ತು ಸುತ್ತಮುತ್ತಲಿನ ತಾಲೂಕುಗಳಾದ ದಾಬಸ್ ಪೇಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ಸರ್ಜಾಪುರ, ಹೊಸಕೋಟೆ, ಕನಕಪುರ, ಅತ್ತಿಬೆಲೆ, ಸೂಲಿಬೆಲೆ, ತಟ್ಟೆಕೆರೆ, ರಾಮನಗರ, ಮಾಗಡಿ ಮತ್ತು ಆನೇಕಲ್‍ಗೆ ಗಣನೀಯ ಪ್ರಯೋಜನವನ್ನು ನೀಡುತ್ತದೆ. ಇದು ವಾಹನ ಸಂಚಾರ ದಟ್ಟಣೆಯನ್ನು ನಿವಾರಿಸುವುದು ಮತ್ತು ಪ್ರಯಾಣದ ದಕ್ಷತೆ, ಸುರಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ಪ್ರಯಾಣದ ಸಮಯ ಉಳಿಯುತ್ತದೆ ಎಂದು ಹೇಳಿದ್ದಾರೆ.
ಈ ಯೋಜನೆಯನ್ನು ಭಾರತಮಾಲಾ ಪರಿಯೋಜನಾ ಅಡಿಯಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲಾಗುತ್ತಿದೆ ಹಾಗೂ ಈ ಪ್ರದೇಶದ ಅಭಿವೃದ್ಧಿಗೆ ಪ್ರಮುಖ ಮೈಲಿಗಲ್ಲಾಗಿದೆ. ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ದೀರ್ಘಕಾಲಿಕ ಪರಿಹಾರವನ್ನು ನೀಡುತ್ತದೆ ಮತ್ತು ಸಾವಿರಾರು ದೈನಂದಿನ ಪ್ರಯಾಣಿಕರಿಗೆ ಸಂಪರ್ಕವನ್ನು ಸುಧಾರಿಸಲು ನೆರವಾಗಲಿದೆ ಎಂದು ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.







