ಲಕ್ಷ್ಮೀಶ ತೋಳ್ಪಾಡಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಬೆಂಗಳೂರು: 2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಪ್ರಬಂಧ ವಿಭಾಗದಲ್ಲಿ ಕನ್ನಡದ ಹಿರಿಯ ಲೇಖಕ, ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರ ಕೃತಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಶಾಂತಿಗೋಡು ಮೂಲದ ಲಕ್ಷ್ಮೀಶ ತೋಳ್ಪಾಡಿ ಅವರ ಮಹಾಭಾರತ ಅನುಸಂಧಾನದ ‘ಭಾರತಯಾತ್ರೆ’ ಪ್ರಬಂಧಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ ದೊರಕಿದೆ.
ಖ್ಯಾತ ವಾಗ್ಮಿಯೂ ಆಗಿರುವ ಲಕ್ಷ್ಮೀಶ ತೋಳ್ಪಾಡಿ ಅವರು ಭಗವದ್ಗೀತೆಯ ಬಗೆಗಿನ ‘ಮಹಾಯುದ್ದಕ್ಕೆ ಮುನ್ನ’ ಮೊದಲ ಪ್ರಕಟಿತ ಕೃತಿ. ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ, ಸಂಪಿಗೆ ಭಾಗವತ, ಬಾಳು ಸಾವು ಒಡ್ಡುತ್ತಿರುವ ಆಮಿಷ, ಆನಂದ ಲಹರಿ, ಭಕ್ತಿಯ ನೆಪದಲ್ಲಿ, ಭವ ತಲ್ಲಣ’ (ತಾಳಮದ್ದಲೆ ಕುರಿತು) ಕೃತಿಗಳು ಪ್ರಕಟವಾಗಿವೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ವಿಭಾಗದ ಆಯ್ಕೆ ಸಮಿತಿಯಲ್ಲಿ ಹಿರಿಯ ಪತ್ರಕರ್ತ ಹಾಗೂ ಅಂಕಣಕಾರರೂ ಆಗಿರುವ ನಾಗೇಶ್ ಹೆಗಡೆ, ಲೇಖಕರಾದ ಆನಂದ ಝಂಜರವಾಡ, ಜೆ.ಎಸ್.ತೇಜಶ್ರೀ ಅವರು ಇದ್ದರು. ಪ್ರಶಸ್ತಿ ಪುರಸ್ಕೃತರಿಗೆ 2024ರ ಮಾರ್ಚ್ 12ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.





