ನಾಳೆಯಿಂದ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ನಾಳೆಯಿಂದ (ಜ.17) ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ(ಸಿಇಟಿ) ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಫೆ.16 ಮತ್ತು ಅರ್ಜಿ ಶುಲ್ಕ ಪಾವತಿಸಲು ಫೆ.18 ಕೊನೆ ದಿನವಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟನೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಸಾಕಷ್ಟು ಸಮಯ ನೀಡಿರುವ ಕಾರಣ ಅಭ್ಯರ್ಥಿಗಳು ಸಿಇಟಿ ಮಾಹಿತಿಯನ್ನು ಓದಿ, ಮನನ ಮಾಡಿಕೊಂಡ ನಂತರ ಅರ್ಜಿ ಭರ್ತಿ ಮಾಡಬೇಕು. ಅಭ್ಯರ್ಥಿಗಳು ತಮಗೆ ಅನ್ವಯವಾಗುವ ಮೀಸಲಾತಿಗಳಿಗೆ ಪೂರಕವಾಗಿ ದಾಖಲೆಗಳನ್ನು ಇಟ್ಟುಕೊಂಡು ಅರ್ಜಿ ಭರ್ತಿ ಮಾಡಬೇಕು ಎಂದಿದ್ದಾರೆ.
ಪ್ರಸಕ್ತ ಸಾಲಿನ ಅರ್ಜಿಯು ಆಧಾರ್ ಆಧಾರಿತ ಅರ್ಜಿಯಾಗಿದ್ದು, ಅದರಲ್ಲಿನ ಹೆಸರು ಇತ್ಯಾದಿ ಅಂಶಗಳು ಅರ್ಜಿಯಲ್ಲಿ ನಮೂದು ಆಗಲಿದೆ. ಇದಲ್ಲದೆ, ಇ-ಮೇಲ್ ಮೂಲಕವೂ ಓಟಿಪಿ ಜತೆಗೆ ಪ್ರತಿ ಹಂತದ ಮಾಹಿತಿಯನ್ನು ತಿಳಿಸುವ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ವಾಟ್ಸ್ ಅಪ್ ಮೂಲಕವೂ ಸಂದೇಶಗಳು ರವಾನೆಯಾಗಲಿವೆ ಎಂದು ಅವರು ವಿವರಿಸಿದ್ದಾರೆ.
ಅರ್ಜಿ ಭರ್ತಿ ಸಂಬಂಧ ಎಲ್ಲ ಕಾಲೇಜು ಸಿಬ್ಬಂದಿಗೆ ಹತ್ತು ದಿನಗಳ ಕಾಲ ಆನ್ ಲೈನ್ ತರಬೇತಿ ನೀಡಲಾಗಿದೆ. ಹೀಗಾಗಿ ಅಭ್ಯರ್ಥಿಗಳು ತಮ್ಮ ಕಾಲೇಜುಗಳಲ್ಲಿಯೇ ಅರ್ಜಿ ಭರ್ತಿ ಮಾಡಿ, ಸಲ್ಲಿಸಬಹುದು. ಅಗತ್ಯಬಿದ್ದಾಗ ಉಪನ್ಯಾಸಕರ ನೆರವು ಪಡೆಯಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಸ್ಯಾಟ್ಸ್ ಮತ್ತು ಆರ್ ಡಿ ಸಂಖ್ಯೆ ದಾಖಲಿಸಿದ ನಂತರ ಆನ್ ಲೈನ್ ನಲ್ಲಿ ವೆರಿಫಿಕೇಷನ್ ಆಗುವ ಅಭ್ಯರ್ಥಿಗಳು ಯಾವ ಕಾಲೇಜಿಗೆ ಪರಿಶೀಲನೆ ಸಲುವಾಗಿ ಹೋಗುವ ಅಗತ್ಯ ಇಲ್ಲ. ನೇರವಾಗಿ ಅರ್ಜಿಯನ್ನು ಮುದ್ರಿಸಿಕೊಳ್ಳಬಹುದು. ಆದರೆ ಆನ್ ಲೈನ್ ನಲ್ಲಿ ಪರಿಶೀಲನೆ ಆಗದವರು ಕಾಲೇಜು ಹಂತದಲ್ಲೇ ಪರಿಶೀಲನೆ ಮಾಡಿಸಿಕೊಳ್ಳಬೇಕು. ನಂತರ ಅರ್ಜಿ ಮುದ್ರಣ ಮಾಡಿಕೊಳ್ಳಲು ಅವಕಾಶವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಪ್ರಾಧಿಕಾರದ ವೆಬ್ಸೈಟ್ https://cetonline.karnataka.gov.in/kea/ ಗೆ ಸಂಪರ್ಕಿಸಬಹುದಾಗಿದೆ.
ಪರೀಕ್ಷಾ ವೇಳಾಪಟ್ಟಿ: ಎಪ್ರಿಲ್ 23ರ ಬೆಳಿಗ್ಗೆ 10:30 ರಿಂದ 11:50ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2:30ರಿಂದ 3:50 ರವರೆಗೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಎಪ್ರಿಲ್ 24ರ ಬೆಳಗ್ಗೆ 10:30 ರಿಂದ 11:50ರವರೆಗೆ ಗಣಿತಶಾಸ್ತ್ರ ಮಧ್ಯಾಹ್ನ 2:30ರಿಂದ 3:50 ರವರೆಗೆ ಜೀವಶಾಸ್ತ್ರ ಪರೀಕ್ಷೆ ನಡೆಯಲಿದೆ.
ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯು ಎಪ್ರಿಲ್ 22ರಂದು ಬೆಳಿಗ್ಗೆ 10:30 ರಿಂದ 11:30ರವರೆಗೆ ಬೆಂಗಳೂರು, ಬೆಳಗಾವಿ, ವಿಜಯಪುರ ಮತ್ತು ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ.
ʼಎಂಜಿನಿಯರಿಂಗ್, ಪಶು ವೈದ್ಯಕೀಯ, ಕೃಷಿ ವಿಜ್ಞಾನ ಸೇರಿದಂತೆ ಇತರ ವೃತ್ತಿಪರ ಕೋರ್ಸ್ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಕೌನ್ಸೆಲಿಂಗ್ ಮತ್ತು ವೈದ್ಯಕೀಯ ಕೋರ್ಸ್ ಗಳಿಗೆ ನೀಟ್ ಅಂಕಗಳ ಆಧಾರದ ಮೇಲೆ ಸೀಟು ಹಂಚಿಕೆಯನ್ನು ಮಾಡಲಾಗುವುದುʼ
- ಎಚ್.ಪ್ರಸನ್ನ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ







