ಬಿಬಿಎಂಪಿ ಚುನಾವಣೆ ಮುಂದೂಡಿಕೆಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ಚ್ಯುತಿ ತರುವ ಕೆಲಸ : ಛಲವಾದಿ ನಾರಾಯಣಸ್ವಾಮಿ
"ಬ್ರ್ಯಾಂಡ್ ಬೆಂಗಳೂರು ಮಾಡಲು ಆಗದವರು ಗ್ರೇಟರ್ ಬೆಂಗಳೂರು ಮಾಡುತ್ತಾರಾ"

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಚುನಾವಣೆ ಮುಂದೂಡುತ್ತಾ ಹೋಗುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಚ್ಯುತಿ ತರುವ ಕೆಲಸ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದ್ದಾರೆ.
ಶನಿವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬ್ರ್ಯಾಂಡ್ ಬೆಂಗಳೂರು ಎನ್ನುತ್ತಿದ್ದವರು ಈಗ ಗ್ರೇಟರ್ ಬೆಂಗಳೂರಿಗೆ ಯಾಕೆ ಹೋದರು? ಬ್ರ್ಯಾಂಡ್ ಬೆಂಗಳೂರು ಮಾಡಲು ಆಗದವರು ಯಾವ ಗ್ರೇಟರ್ ಬೆಂಗಳೂರು ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಬೆಂಗಳೂರನ್ನು 7 ಭಾಗ ಮಾಡುವುದು ಸರಿಯಾದ ಕ್ರಮ ಅಲ್ಲ. ಗ್ರೇಟರ್ ಬೆಂಗಳೂರು ಮಾಡಿ ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಛಿದ್ರಗೊಳಿಸಲು ನೀವು ಹೊರಟಿದ್ದೀರಿ. ಈಗಾಗಲೇ ವಿಚ್ಛಿದ್ರಕಾರಿ ಜನರು ಬಂದು ಬೆಂಗಳೂರನ್ನು ಹಾಳು ಮಾಡಿದ್ದಾರೆ. ಬೆಂಗಳೂರನ್ನು ಸುಭದ್ರಗೊಳಿಸುವುದನ್ನು ಬಿಟ್ಟು ಆರು ಭಾಗ, ಏಳು ಭಾಗ ಮಾಡಿ ಆರೋ ಏಳೇ ಮೇಯರ್ ಮಾಡಲು ಹೊರಟಿದ್ದೀರಿ ಎಂದು ಅವರು ಕಿಡಿಗಾರಿದರು.
ಮೇಯುವವರಿಗೆ ಅವಕಾಶ ಸಿಗುತ್ತದೆಯೇ ಹೊರತು ಬೆಂಗಳೂರನ್ನು ಕಟ್ಟುವವರಿಗೆ ಅವಕಾಶ ಸಿಗುವುದಿಲ್ಲ. ದೇವರು ಬಂದರೂ ಬೆಂಗಳೂರನ್ನು ಕಾಪಾಡಲಾಗದು ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ. ಹಾಗಾದರೆ, ಅವರ ಕೆಲಸ ಏನು?, ನಿಮ್ಮಿಂದ ಸಾಧ್ಯವಾಗದಿದ್ದರೆ ಬಿಟ್ಟು ಹಾಕಿ, ರಾಜೀನಾಮೆ ಕೊಟ್ಟು ತೊಲಗಿ ಎಂದು ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಅವರು ಇನ್ನೂ ಗ್ಯಾರಂಟಿಗಳಿಂದ ಹೊರಬಂದೇ ಇಲ್ಲ, ಈ ಗ್ಯಾರಂಟಿಯೇ ನಮ್ಮನ್ನು ಬಹಳ ಕಾಲ ರಕ್ಷಿಸುತ್ತದೆ ಎಂದು ಅವರು ತಿಳಿದುಕೊಂಡಿದ್ದಾರೆ. ಗ್ಯಾರಂಟಿಗಳ ವಾರಂಟಿ ಈಗಾಗಲೇ ಕಳೆದುಹೋಗಿದೆ ಎಂದು ನಾರಾಯಣ ಸ್ವಾಮಿ ತಿಳಿಸಿದರು.
ಕನ್ನಡದ ಜನರ ಮೇಲೆ ಇವತ್ತು ಗಡಿಭಾಗದಲ್ಲಿ ದಾಳಿ ನಡೆದಿದೆ. ಪುಂಡಾಟಿಕೆ ನಡೆಯುತ್ತಿದೆ. ನಿಮ್ಮ ಆಡಳಿತ ವ್ಯವಸ್ಥೆ ಕುಸಿದುಬಿದ್ದಿದೆ. ಕಾನೂನು- ಸುವ್ಯವಸ್ಥೆ ಕಾಪಾಡಲು ನಿಮ್ಮಿಂದ ಆಗುತ್ತಿಲ್ಲ. ಒಂದೆಡೆ ಪೊಲೀಸ್ ಠಾಣೆಗಳ ಮೇಲೆ ಕಲ್ಲು ತೂರಾಟ, ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದರು.
ಕೋರಮಂಗಲದಲ್ಲಿ ನಿನ್ನೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಪೊಲೀಸರು ಈ ಘಟನೆಗೆ ಬೇರೆ ಬೇರೆ ರೀತಿಯ ಆಯಾಮಗಳನ್ನೂ ನೀಡಿದ್ದಾರೆ. ಪುಂಡಾಟಿಕೆ ತಡೆಯಲಾಗದೆ ಬೇರೆ ಬೇರೆ ಆಯಾಮ ಕಲ್ಪಿಸುತ್ತಿದ್ದಾರೆ. ನಿಮ್ಮ ಸರಕಾರದಿಂದ ಜನರು ಉತ್ತಮವಾದುದನ್ನು ಬಯಸುವ ಪರಿಸ್ಥಿತಿ ಇಲ್ಲ ಎಂದು ನಾರಾಯಣಸ್ವಾಮಿ ನುಡಿದರು.
ಮುಡಾ ವಿಚಾರದಲ್ಲಿ ಜೈಲಿಗೆ ಹೋಗುವುದು ಖಚಿತ:
ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಮೂಡಿನಲ್ಲೇ ಇದ್ದಾರೆ. ಅವರ ಮೂಡ್ ಇನ್ನೂ ಬದಲಾಗಿಲ್ಲ. ಮುಡಾ ಅವರನ್ನು ಕಾಡುತ್ತಿದೆ. ಮುಡಾ ಇಲ್ಲಿಗೇ ನಿಲ್ಲುವಂಥದ್ದಲ್ಲ. ನೀವು ಯಾರಿಂದ ಏನು ಬೇಕಾದರೂ ಪ್ರಮಾಣಪತ್ರ ತೆಗೆದುಕೊಳ್ಳಿ. ಈ ದೇಶದ ಕಾನೂನು ಸತ್ತಿಲ್ಲ. ನ್ಯಾಯಾಲಯಗಳು ಉತ್ತಮವಾಗಿಯೇ ನಡೆಯುತ್ತಿದ್ದು, ಮುಡಾ ವಿಚಾರದಲ್ಲಿ ನೀವು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.







