ಸಿದ್ದರಾಮಯ್ಯ ಪದಚ್ಯುತಿಗೆ ಎಐಸಿಸಿ ಖೆಡ್ಡಾ : ಛಲವಾದಿ ನಾರಾಯಣಸ್ವಾಮಿ

ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಖೆಡ್ಡಾ ತೋಡಿದ್ದ ಕಾಂಗ್ರೆಸ್ ಹೈಕಮಾಂಡ್, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಖೆಡ್ಡಾ ತೋಡುತ್ತಿದೆ ಎಂದು ಜನರು ಮಾತನಾಡುತ್ತಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಸೋಮವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ತಂತ್ರ-ಮಂತ್ರಗಳನ್ನು ಮಾಡುತ್ತಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಹೊಸದೇನೂ ಅಲ್ಲ ಎಂದು ಹೇಳಿದರು.
ರಾಜ್ಯದ ಸರಕಾರವು ದಲಿತ ವಿರೋಧಿಯಾಗಿದ್ದು, ದಲಿತರನ್ನು ಸರ್ವನಾಶ ಮಾಡುತ್ತಿದೆ. ದಲಿತರಿಗೆ ಮೀಸಲಿಟ್ಟ ಎಸ್ಇಪಿ, ಟಿಎಸ್ಪಿ ಹಣವನ್ನು ಗ್ಯಾರಂಟಿಗಳಿಗೆ ಬಳಸಿ ದಲಿತರಿಗೆ ಸಂಪೂರ್ಣವಾಗಿ ಅನ್ಯಾಯ ಮಾಡಿದ್ದ ಕಾಂಗ್ರೆಸ್ ಸರಕಾರವು, ಈಗ ದಲಿತ ಸಮುದಾಯದ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಉನ್ನತ ಹುದ್ದೆಗೆ ನೇಮಿಸುವ ಸಂದರ್ಭದಲ್ಲಿ ಸಂಪೂರ್ಣವಾಗಿ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ಬೆಂಗಳೂರು ವಿಶ್ವವಿದ್ಯಾಲಯದ 10 ಜನ ದಲಿತ ಪ್ರೊಫೆಸರ್ಗಳು ತಾರತಮ್ಯವನ್ನು ಆಕ್ಷೇಪಿಸಿ, ಸರಕಾರದ ಕ್ರಮವನ್ನು ವಿರೋಧಿಸಿ ಕುಲಪತಿಗಳಿಗೆ ರಾಜೀನಾಮೆ ಸಲ್ಲಿಸಿ ಹೊರ ಬಂದಿದ್ದಾರೆ ಎಂದು ನಾರಾಯಣಸ್ವಾಮಿ ಹೇಳಿದರು.
ರಸ್ತೆ ಬೇಕೇ, ಗ್ಯಾರಂಟಿ ಬೇಕೇ ಎಂಬ ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಯರೆಡ್ಡಿ ಅವರು ಮುಖ್ಯಮಂತ್ರಿಯ ಮುಖವಾಣಿ ಇದ್ದಂತೆ. ಅವರು ಆರ್ಥಿಕ ತಜ್ಞರು, ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರರು. ನಾವು ಗ್ಯಾರಂಟಿ ಕೊಟ್ಟಿದ್ದೇವೆ, ನೀವು ಯಾರೂ ಬೇರೇನೂ ಮಾತನಾಡಬಾರದೆಂಬ ಉದ್ದೇಶ ಇದರ ಹಿಂದೆ ಇದ್ದಂತಿದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಇದನ್ನು ಹೇಳಲಾಗದೆ ಅವರ ಕೈಲಿ ಈ ಸಂದೇಶ ಕೊಟ್ಟಿದ್ದಾರೆ ಎಂದು ಆರೋಪಿಸಿದರು.







