‘ರಾಜ್ಯ ಸರಕಾರದ ಜನವಿರೋಧಿ ನೀತಿಗಳ ವಿರುದ್ಧದ ಹೋರಾಟಕ್ಕೆ ಬನ್ನಿ’ : ರಾಹುಲ್ ಗಾಂಧಿಗೆ ಛಲವಾದಿ ನಾರಾಯಣಸ್ವಾಮಿ ಆಹ್ವಾನ

ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು : ‘ಮತಗಳವು ಪ್ರಕರಣ ಸಂಬಂಧ ಹೋರಾಟ ಮಾಡಲು ಕರ್ನಾಟಕಕ್ಕೆ ಆಗಮಿಸುತ್ತಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರೇ, ಅದಕ್ಕೂ ಮೊದಲು ನಿಮ್ಮ ಕಾಂಗ್ರೆಸ್ ಪಕ್ಷದ ನೇತೃತ್ವದ ರಾಜ್ಯ ಸರಕಾರದ ಜನವಿರೋಧಿ ನೀತಿ, ದಲಿತರ ಹಣ ಕಳ್ಳತನ, ಸರಕಾರದ ಭ್ರಷ್ಟಾಚಾರದ ವಿರುದ್ಧ ನಾವು(ಬಿಜೆಪಿ) ಜನಾಂದೋಲನ ರೂಪಿಸಿ, ನಾವೆಲ್ಲರೂ ಒಟ್ಟಾಗಿ ಹೋರಾಡೋಣ ಬನ್ನಿ’ ಎಂದು ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಹ್ವಾನ ನೀಡಿದ್ದಾರೆ.
ರವಿವಾರ ಈ ಸಂಬಂಧ ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿರುವ ಅವರು, ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಿ. ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಕಪಟ ನಾಟಕದ ‘ಸೂತ್ರದಾರ’ರಿದ್ದಾರೆ, ಅವರಿಂದ ಪ್ರೇರೇಪಿತರಾದ ನೀವು ‘ಪಾತ್ರದಾರಿ’ಯಾಗಿ ಕರ್ನಾಟಕಕ್ಕೆ ಬರುತ್ತಿದ್ದೀರಿ. ಇಲ್ಲಿಗೆ ಆಗಮಿಸುತ್ತಿರುವ ನಿಮಗೆ ಸ್ವಾಗತ ಕೋರುತ್ತೇನೆ ಎಂದು ಲೇವಡಿ ಮಾಡಿದ್ದಾರೆ.
ಅಂಬೇಡ್ಕರ್ಅವರನ್ನು ಚುನಾವಣೆಗಳಲ್ಲಿ ಸೋಲಿಸಲು ಕಾಂಗ್ರೆಸ್ ಪಕ್ಷ ಮತಗಳ್ಳತನ ಮಾಡಲಿಲ್ಲವೇ?. ಅಂಬೇಡ್ಕರ್ ಅವರನ್ನು ಸೋಲಿಸಲು ಕಾಂಗ್ರೆಸ್ ತೆಗೆದುಕೊಂಡ ನೈತಿಕ ಕಾರಣಗಳೇನು?. ಅಂಬೇಡ್ಕರ್ರಿಗೆ ಕಾಂಗ್ರೆಸ್ ಪಕ್ಷವು ಮಾಡಿದ ನಿರಂತರ ಅವಮಾನಗಳ ಹಿಂದಿರುವ ನಿಮ್ಮ ನಿಜವಾದ ನಿಲುವೇನು?. ಇಂದಿರಾ ಗಾಂಧಿಯವರು ಕೋರ್ಟ್ ತೀರ್ಪಿನ ಪ್ರಕಾರ ಅನರ್ಹರಾಗಲು ಕಾರಣಗಳೇನು?. ಅನರ್ಹರಾಗದಂತೆ ನಡೆಸಿದ ಕಾನೂನು ಬದಲಾವಣೆಗಳು ಹಾಗೂ ತುರ್ತು ಪರಿಸ್ಥಿತಿ ಘೋಷಣೆಯ ಹಿಂದಿನ ಕಾರಣಗಳೇನು? ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿಯವರು ಮತಗಳ್ಳತನ ಮಾಡಿದ್ದರೆ, ನೀವು ವಿರೋಧ ಪಕ್ಷದ ನಾಯಕನಾಗಿ ಸದನದಲ್ಲಿ ಕುಳಿತುಕೊಳ್ಳುವ ಅವಕಾಶ ಸಿಗುತ್ತಿತ್ತೇ?. ಕರ್ನಾಟಕದಲ್ಲಿ ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ಮೀಸಲಾಗಿದ್ದ ಎಸ್ಸಿಪಿ-ಟಿಎಸ್ಪಿ ಯೋಜನೆಯ 39ಸಾವಿರ ಕೋಟಿ ರೂ.ಹಣವನ್ನು ರಾಜ್ಯ ಸರಕಾರ ಕಳ್ಳತನ ಮಾಡಿದೆ, ಇದರ ವಿರುದ್ಧ ಯಾವಾಗ ಹೋರಾಟ ಮಾಡುತ್ತೀರಿ?’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.







