‘ನವೆಂಬರ್ ಕ್ರಾಂತಿ’ ಡಿನ್ನರ್ ಮೀಟಿಂಗ್‍ಗೆ ನಿಕಟ ಸಂಬಂಧ : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು, ಅ. 10: ‘ನವೆಂಬರ್ ಕ್ರಾಂತಿ’ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವರಿಗೆ ಕರೆದಿರುವ ಔತಣಕೂಟಕ್ಕೂ ನಿಕಟ ಸಂಬಂಧವಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿಶ್ಲೇಷಿಸಿದ್ದಾರೆ.
ಶುಕ್ರವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ಸಿನಲ್ಲಿ ದೊಡ್ಡ ಬೆಳವಣಿಗೆ ನಡೆಯುತ್ತಿದೆ ಎಂಬುದು ಜನರ ಅನಿಸಿಕೆಯಾಗಿದೆ. ಸಿಎಂ ಡಿನ್ನರ್ ಮೀಟಿಂಗ್ ಕರೆದಿದ್ದಾರೆ. ಕೆಲ ಸಚಿವರು, ಬೇರೆ-ಬೇರೆ ಸಭೆ ನಡೆಸುತ್ತಿದ್ದಾರೆ. ಇವೆಲ್ಲ ಕ್ರಾಂತಿಯ ಆಜುಬಾಜು ಓಡಾಡುವ ವಿಚಾರಗಳು. ಒಟ್ಟಾರೆ ಹೇಳುವುದಾದರೆ, ಡಿನ್ನರ್ ಮೀಟಿಂಗ್ ಎಂದರೆ ಅದೊಂದು ವಿಶೇಷತೆ ಎಂದರು.
ಇದು ಸಿಎಂ ಸಿದ್ದರಾಮಯ್ಯನವರ ಅಧಿಕಾರದ ಅಂತ್ಯವೇ?. ಡಿ.ಕೆ.ಶಿವಕುಮಾರರ ಗುಂಪು ಹೇಳುವ ರೀತಿಯಲ್ಲಿ ನವೆಂಬರ್‍ನಲ್ಲಿ ಶಿವಕುಮಾರ್ ಮುಖ್ಯಮಂತ್ರಿ ಅಧಿಕಾರಾವಧಿ ಪ್ರಾರಂಭವೇ? ಎಂದು ಪ್ರಶ್ನಿಸಿದ ಅವರು, ದಲಿತರನ್ನು ಮುಖ್ಯಮಂತ್ರಿ ವಿಚಾರದಲ್ಲಿ 75ಕ್ಕೂ ಹೆಚ್ಚು ವರ್ಷಗಳಿಂದ ವಂಚಿಸಿದ ಕಾಂಗ್ರೆಸ್ ಪಕ್ಷವು ಈಗಲಾದರೂ ದಲಿತ ಸಿಎಂ ವಿಚಾರಕ್ಕೆ ತೆರೆ ಎಳೆಯುವುದೇ? ಎಂದು ಕೇಳಿದರು.
ಸಿಎಂ ಆಗಿ ಡಾ.ಪರಮೇಶ್ವರ್ ಅವರನ್ನು ಮಾಡುವ ವಿಚಾರ ನಿನ್ನೆಯಿಂದ ಹೊರಕ್ಕೆ ಬರುತ್ತಿದೆ. ಸಿದ್ದರಾಮಯ್ಯರ ಕಡೆಯವರು ಈ ಕುರಿತು ಮಾತನಾಡುತ್ತಿದ್ದು, ಸಿದ್ದರಾಮಯ್ಯನವರು ಡಾ.ಪರಮೇಶ್ವರ್ ಅವರನ್ನು ತರಬೇಕೆಂದು ಯೋಚಿಸಿದ್ದಾರಾ?..ಹೀಗೆ ಅನೇಕ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಬರುತ್ತಿದೆ ಎಂದು ನಾರಾಯಣಸ್ವಾಮಿ ತಿಳಿಸಿದರು.
ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ 300ಕೋಟಿ ರೂ.ಬಿಹಾರ ಚುನಾವಣೆಗೆ ಕೊಡಲು ಮುಂದಾಗಿದ್ದರು ಎಂಬ ಮಾಹಿತಿ ಇದೆ. ಆ ಮೊತ್ತ ಕೊಡುವ ಕಾರಣಕ್ಕೆ ಮಂತ್ರಿ ಮಾಡಬೇಕೆಂದು ಕೇಳಿದ್ದಾಗಿ ಕೆಲವರು ಮಾತನಾಡಿದ್ದು, ಈ.ಡಿ. ದಾಳಿ ವೇಳೆ 400ಕೋಟಿ ರೂ.ಮೌಲ್ಯದ ಆಸ್ತಿ ಸಿಕ್ಕಿದೆ ಎಂದು ಕೇಳಿದ್ದೇನೆ. ಕಾಂಗ್ರೆಸ್‍ನಲ್ಲಿ ಇವರೊಬ್ಬರೇ ಅಲ್ಲ, ನೂರಾರು ಕುಟುಂಬಗಳು ಭ್ರಷ್ಟಾಚಾರದಲ್ಲಿ ತೊಡಗಿವೆ ಎಂದು ಅವರು ಟೀಕಿಸಿದರು.







