ಸುರಂಗ ರಸ್ತೆಯಿಂದ ಬೆಂಗಳೂರಿಗೆ ಆಪತ್ತು : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ಸುರಂಗ ರಸ್ತೆ ನಿರ್ಮಾಣ ಮಾಡಿದರೆ ಬೆಂಗಳೂರಿಗೆ ಆಪತ್ತು ಎದುರಾಗಲಿದೆ ಎಂಬ ವರದಿಗಳಿವೆ. ಹೀಗಿದ್ದರೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕ್ಷೇಪಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುರಂಗ ರಸ್ತೆ ಯೋಜನೆ ವಿರುದ್ಧ ಈಗಾಗಲೇ ಹಲವು ಸಂಸ್ಥೆಗಳು-ಪರಿಸರವಾದಿಗಳು ಧ್ವನಿ ಎತ್ತಿದ್ದಾರೆ. ಅದೇನು ಜನೋಪಯೋಗಿ ಎಂದು ನನಗೆ ಅನಿಸುತ್ತಿಲ್ಲ, ಸುರಂಗ ರಸ್ತೆಗೆ 300-400 ರೂ. ಟೋಲ್ ಕೊಡಬೇಕಾಗುತ್ತದೆ. ಹಣ ಕಟ್ಟಿಸಿಕೊಳ್ಳದೇ ಮಾಡುವ ಕೆಲಸ ಇದ್ದರೆ ಮಾಡಿ ಎಂದರು.
ಬೆಂಗಳೂರು ಬೆಳೆಸುವುದನ್ನು ನಿಲ್ಲಿಸಿ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಬೆಳೆಸಿ. ಬೆಂಗಳೂರು ಹೊರ ವಲಯದ ನಗರಗಳಲ್ಲಿ ಜನರು ನಿಲ್ಲುವಂತೆ ಮಾಡಿ. ಕಲಬುರಗಿ ಸ್ಥಿತಿ ಏನಾಗಿದೆ?. ತಲಾದಾಯದ ವಿಷಯದಲ್ಲಿ ಅದು ಅತ್ಯಂತ ಹಿಂದುಳಿದಿದೆ. ವಿಜಯಪುರ ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಕೈಗಾರಿಕೆ ಸ್ಥಾಪಿಸಿ ಎಂದು ಅವರು ಮನವಿ ಮಾಡಿದರು.
ವಿವೇಕ ಇಲ್ಲ: ಸಚಿವ ಪ್ರಿಯಾಂಕ್ ಖರ್ಗೆಗೆ ವಿವೇಕ ಇದೆ ಎಂದು ಅನ್ನಿಸುತ್ತಿಲ್ಲ. ಹೀಗಾಗಿ ಅವರು ಕೇಳುವ ಪ್ರಶ್ನೆಗಳಿಗೆ ನಾನು ಉತ್ತರ ನೀಡುವುದಿಲ್ಲ. ‘ಆರೆಸ್ಸೆಸ್‍ಗೆ ದೇಣಿಗೆ ಎಲ್ಲಿಂದ ಬರುತ್ತದೆ’ ಎಂಬುದನ್ನು ಆರೆಸ್ಸೆಸ್ ಕಚೇರಿಗೆ ಹೋಗಿ ಕೇಳಬೇಕು. ಎಲ್ಲೊ ಕುಳಿತು ಯಾರನ್ನೋ ಪ್ರಶ್ನಿಸಿದರೆ ಉತ್ತರ ನೀಡಲು ಸಾಧ್ಯವೇ?’ ಎಂದು ನಾರಾಯಣಸ್ವಾಮಿ ಟೀಕಿಸಿದರು.
ಆರೆಸ್ಸೆಸ್ ನೋಂದಣಿ ಆಗಬೇಕೆಂದು ಕಾನೂನಿನಲ್ಲಿ ಇಲ್ಲ. ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಸಚಿವರು, ಅಲ್ಲಿ ಕೆಲಸ ಮಾಡಲಾರದೇ ಜನರನ್ನು ದಾರಿ ತಪ್ಪಿಸಲು ಈ ರೀತಿ ಅನ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದೂರಿದ ಅವರು, ಬಿಜೆಪಿಯವರು 40-50 ವರ್ಷ ರಾಜ್ಯವನ್ನು ಆಳಿಲ್ಲ ಎಂದು ಅವರು ಹೇಳಿದರು.
ದುಡ್ಡು ತರುವ ಕೆಲಸ ಸಂಸದರದ್ದು ಅಲ್ಲ: ಸಂಸದರದ್ದು ದುಡ್ಡು ತರುವ ಕೆಲಸ ಅಲ್ಲ, ಅವರೇನು ಏಜೆಂಟರೇ? ಅವರು ರಿಯಲ್ ಎಸ್ಟೇಟ್ ಮಾಡುತ್ತಾರಾ?. ನೀವು ಮೊದಲು ರಾಜೀನಾಮೆ ಕೊಡಿ, ಆಮೇಲೆ ಅವರು ಹಣ ತರುತ್ತಾರೆ. ಕುಣಿಯಲಾರದವರಿಗೆ ನೆಲ ಡೊಂಕು ಎಂಬಂತೆ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ ಎಂದು ನಾರಾಯಣಸ್ವಾಮಿ, ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.







