ಕೇವಲ ಮಸೂದೆ ಅಂಗೀಕಾರದ ಅಧಿವೇಶನವೇ? : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ಬೆಳಗಾವಿ ವಿಧಾನ ಮಂಡಲ ಅಧಿವೇಶನ ಕೇವಲ ಮಸೂದೆಗಳ ಅಂಗೀಕಾರಕ್ಕೆ ನಡೆಸುವ ಕಲಾಪವೇ? ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಡಿ.8ರಿಂದ ಬೆಳಗಾವಿಯಲ್ಲಿ ಸದನ ಆರಂಭವಾಗಲಿದೆ. ಉತ್ತರ ಕರ್ನಾಟಕ ಭಾಗದ ವಿಷಯಗಳನ್ನು ಚರ್ಚಿಸಲು ಅಲ್ಲಿ ಅಧಿವೇಶನ ಮಾಡಲಾಗುತ್ತದೆ. ಆದರೆ, ಈಗಾಗಲೇ 31 ಮಸೂದೆಗಳು ಸಿದ್ಧವಿದ್ದವು. ಅಲ್ಲದೆ, ಇದೀಗ ಮತ್ತೆ 21 ಮಸೂದೆಗಳು ಇರುವುದಾಗಿ ತಿಳಿದುಬಂದಿದೆ. ಇದು ಮಸೂದೆ ಅಂಗೀಕಾರ ಅಧಿವೇಶನವೇ?. ಕೇವಲ 9-10 ದಿನಗಳ ಕಲಾಪದಲ್ಲಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸದಿರಿ ಎಂದು ಆಗ್ರಹಿಸಿದರು.
ಸರಕಾರ ತಾರತಮ್ಯ ನೀತಿಯನ್ನು ವಿರೋಧಿಸಿ ಆಡಳಿತ ಪಕ್ಷದ ಶಾಸಕ ರಾಜುಕಾಗೇ ಪ್ರತ್ಯೇಕ ರಾಜ್ಯದ ಕುರಿತು ಮಾತನಾಡಿದ್ದಾರೆ. ನೀವು ತಾರತಮ್ಯ ಮಾಡಿದರೆ ಇಂತಹ ಕೂಗು ಹೆಚ್ಚಾಗುತ್ತದೆ. ಕಾಂಗ್ರೆಸ್ಸಿನವರು ರಾಜ್ಯ-ದೇಶ ಒಡೆಯುವುದರಲ್ಲಿ ನಿಪುಣರು. ಉತ್ತರ ಪ್ರದೇಶ, ಛತ್ತೀಸಘಡ, ಆಂಧ್ರವನ್ನು ಒಡೆದಿದ್ದಾರೆ. ಈಗ ಕರ್ನಾಟಕವನ್ನು ಒಡೆಯುವ ಪ್ರಯತ್ನ ನಡೆಸಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಆಕ್ಷೇಪಿಸಿದರು.
ಬಂಡವಾಳವಿಲ್ಲ: ಕಾಂಗ್ರೆಸ್ ಕೈಯಲ್ಲಿ ಬಂಡವಾಳವಿಲ್ಲ. ಬಂಡವಾಳ ನೀಡುವ ಒಂದು ರಾಜ್ಯ ಅದು ಕರ್ನಾಟಕ. ಹೀಗಾಗಿ ಹೇಗಾದರೂ ಸರಿ ಅಧಿಕಾರದಲ್ಲಿ ಉಳಿಯಬೇಕೆಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪೈಪೋಟಿಗೆ ಬಿದ್ದಿದ್ದಾರೆ. ರಾಜ್ಯದ ಸ್ಥಿತಿಯನ್ನು ಗಂಭೀರ ಮಾಡಿದ್ದಾರೆ. ಜೊತೆಗೆ ಅನೇಕ ಜ್ವಲಂತ ಸಮಸ್ಯೆಗಳಿವೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.







