ಕುಟುಕು ಕಾರ್ಯಾಚರಣೆ ಆರೋಪ: ಸಿಬಿಐ ತನಿಖೆಗೆ ಛಲವಾದಿ ನಾರಾಯಣಸ್ವಾಮಿ ಒತ್ತಾಯ

ಬೆಂಗಳೂರು : ಕಾಂಗ್ರೆಸ್ಸಿನ ನಾಯಕರು ಅವರ ಪಕ್ಷದವರ ಕುಟುಕು ಕಾರ್ಯಾಚರಣೆ (ಸ್ಟಿಂಗ್ ಆಪರೇಷನ್) ನಡೆಸಿ ಕಾಂಗ್ರೆಸ್ ಪಕ್ಷವನ್ನೇ ಮುಗಿಸುವ ಕೆಲಸವನ್ನ ಮಾಡುತ್ತಿದ್ದು, ಈ ಕುರಿತು ತನಿಖೆಗೆ ಆದೇಶಿಸಿಬೇಕು ಎಂದು ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಅಥವಾ ಬೇರೆ ಯಾರೇ ಇರಲಿ. ಆರೋಪ ಮಾಡಿದ ಮೇಲೆ ಬದ್ಧತೆ ಇರಬೇಕು. ಅದನ್ನು ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆದರೆ ಅನುಮಾನ ಯಾರ ಮೇಲೆ ಬರುತ್ತದೆ. ಸಿದ್ದರಾಮಯ್ಯನವರು ತನಿಖೆ ಕೋರಿ ಸಿಬಿಐಗೆ ಪತ್ರ ಬರೆಯಲಿದೆ ಎಂದು ಒತ್ತಾಯಿಸಿದರು.
ಸತ್ಯ ಹೊರಕ್ಕೆ ಬರಬಾರದು ಎಂಬುದು ಮುಖ್ಯಮಂತ್ರಿ ಉದ್ದೇಶವೇ?, ಎಸ್‍ಐಆರ್ ವಿಚಾರವನ್ನು ಇವರೇ ಮೈಮೇಲೆ ಹಾಕಿಕೊಂಡಿದ್ದಾರೆ. ರಾಹುಲ್ ಗಾಂಧಿ ಹೆಸರನ್ನು ಏನಾದರೂ ಎಸ್‍ಐಆರ್‍ನಲ್ಲಿ ಚುನಾವಣಾ ಆಯೋಗ ಕೈಬಿಟ್ಟಿದೆಯಾ?’ ಎಂದು ಪ್ರಶ್ನಿಸಿದರು.
‘ಆನೆ ನಡೆದಿದ್ದೇ ದಾರಿ’ ಎಂಬಂತೆ ನಡೆದರೆ ಈ ದೇಶದ ಜನರು ಒಪ್ಪುವುದಿಲ್ಲ. ಅಂತಹ ಪರಿಸ್ಥಿತಿಗೆ ಕಾಂಗ್ರೆಸ್ ಬಂದಿದೆ. ಅವರಿಗೆ ನಾಯಕತ್ವ ಇಲ್ಲ. ಅವರು ಜನರಿಂದ ಕಣ್ಮರೆ ಆಗುವ ಸ್ಥಿತಿ ಬಂದಿದೆ. ರಾಹುಲ್ ಗಾಂಧಿ ಯಾವತ್ತೂ ದೇಶದ ಪ್ರಧಾನಮಂತ್ರಿ ಆಗುವುದಿಲ್ಲ. ಯಾಕೆಂದರೆ ಆ ಶಕ್ತಿ, ಆ ಪ್ರೌಢಿಮೆ, ಬುದ್ಧಿವಂತಿಕೆ ಅವರಲ್ಲಿ ಇಲ್ಲ. ಆದುದರಿಂದ ಜನ ಅವರನ್ನು ಈಗಾಗಲೇ ತಿರಸ್ಕಾರ ಮಾಡಿ ಆಗಿದೆ ಎಂದು ಅವರು ಎಚ್ಚರಿಸಿದರು.
ಜ್ಞಾನವೇ ಇಲ್ಲ: ‘ಸುಪ್ರೀಂ ಕೋರ್ಟ್ ಚಲೋ' ಈ ದೇಶದಲ್ಲಿ ಯಾರಾದರೂ ಮಾಡಲು ಸಾಧ್ಯವೇ?. ಕಾಂಗ್ರೆಸ್‍ನವರಿಗೆ ಕನಿಷ್ಟ ಜ್ಞಾನವೇ ಇಲ್ಲ, ಅಜ್ಞಾನಿಗಳಂತೆ ನಡೆದುಕೊಂಡಿದ್ದಾರೆ. ಅವರು ಮಾನ-ಮರ್ಯಾದೆ ಎಲ್ಲವನ್ನೂ ಬಿಟ್ಟುಬಿಟ್ಟಿದ್ದಾರೆ. ದೇಶದಲ್ಲಿ ಅಭದ್ರತೆ ಸೃಷ್ಟಿ ಮಾಡಬೇಕು ಎಂಬ ಅವರಿಗೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ತಕ್ಕ ಪಾಠವನ್ನು ಕಲಿಸಿದ್ದಾರೆಂದು ನಾರಾಯಣಸ್ವಾಮಿ ವಿಶ್ಲೇಷಿಸಿದರು.






