ಚುನಾವಣಾ ಆಯೋಗದ ವಿರುದ್ಧ ಶೀಘ್ರದಲ್ಲೇ ‘ಚಲೋ’ ಹೋರಾಟ: ನಟ ಪ್ರಕಾಶ್ ರಾಜ್

ಪ್ರಕಾಶ್ ರಾಜ್ (Photo: PTI)
ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್ಐಆರ್) ಎಲ್ಲ ಸಂತ್ರಸ್ತರನ್ನು ಒಗ್ಗೂಡಿಸಿ ಶೀಘ್ರದಲ್ಲೇ (ಸೆ.1 ಅಥವಾ ಸೆ.2ಕ್ಕೆ) ಚುನಾವಣಾ ಆಯೋಗ ವಿರುದ್ಧ ‘ಚಲೋʼ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಬಹುಭಾಷಾ ನಟ ಹಾಗೂ ಚಿಂತಕ ಪ್ರಕಾಶ್ ರಾಜ್ ತಿಳಿಸಿದ್ದಾರೆ.
ಸೋಮವಾರ ಎಸ್ಐಆರ್ ವಿರೋಧಿ ಕರ್ನಾಟಕದ ವತಿಯಿಂದ ಎಸ್ಐಆರ್ ಕರಡು ಪಟ್ಟಿಯ ಪ್ರಾಥಮಿಕ ವಿಶ್ಲೇಷಣೆ ಹಾಗೂ ನಮ್ಮ ಮುಂದಿನ ನಡೆಯ ಕುರಿತು ಆಯೋಜಿಸಿದ್ದ ಆನ್ಲೈನ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಎಸ್ಐಆರ್ ಪ್ರಕ್ರಿಯೆಯನ್ನು ವಿರೋಧಿಸುತ್ತಿಲ್ಲ. ಆದರೆ ಎಸ್ಐಆರ್ ನ ಇಡೀ ಪ್ರಕ್ರಿಯೆಯನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಆದುದರಿಂದ ಚುನಾವಣಾ ಆಯೋಗ ಎಸ್ಐಆರ್ ದಿನಾಂಕವನ್ನು ಮುಂದೂಡಬೇಕು ಎಂದು ಆಗ್ರಹಿಸಿದರು.
ಎಸ್ಐಆರ್ ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆ ಆಗಬೇಕಿತ್ತು. ಆದರೆ ಜನರನ್ನು ಹೊರ ದೂಡುವ ಪ್ರಕ್ರಿಯೆಯಾಗಿದೆ. ಇದರ ಬಗ್ಗೆ ದೊಡ್ಡ ಜನಾಂದೋಲನವಾಗಬೇಕಿದೆ ಎಂದು ಪ್ರಕಾಶ್ ರಾಜ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಚುನಾವಣಾ ಆಯೋಗಕ್ಕೆ ಕಾನೂನಿನ ಶಕ್ತಿ ನೀಡಬೇಕು ಎಂದು ನಿರ್ಧಾರ ಮಾಡಿದವರು ಯಾರು?. ಬದುಕಿದ್ದವರನ್ನು ಸತ್ತಿದ್ದಾರೆ ಎಂದರೆ ಹೇಗೆ?. ಎಸ್ಐಆರ್ ಪ್ರಕ್ರಿಯೆಯಲ್ಲಿ ಒಂದು ಮನೆಗೆ ಮೂರು ಸಲ ಹೋಗಿಲ್ಲ. ಜನರಿಗೆ ಎಸ್ಐಆರ್ ಕುರಿತು ಅರಿವು ಮೂಡಿಸಬೇಕಿತ್ತು ಅದು ಕೂಡ ಆಗಿಲ್ಲ ಎಂದು ಪ್ರಕಾಶ್ ರಾಜ್ ಹೇಳಿದರು.
ಎಸ್ಐಆರ್ ಕುರಿತು ರಾಜ್ಯ ಸರಕಾರ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚಿಸಬೇಕು. ಈ ಪ್ರಕ್ರಿಯೆಯನ್ನು ಸರಿಯಾಗಿ ನಡೆಸುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಬೇಕು. ಎಸ್ಐಆರ್ ಕುರಿತು ನಾಳೆ (ಆ.25ರಂದು) ಸುದ್ದಿಗೋಷ್ಠಿ ನಡೆಸಿ, ಚುನಾವಣಾ ಆಯೋಗದ ಚಲೋ ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅವರು ಹೇಳಿದರು.
ಹೋರಾಟಗಾರ ನೂರ್ ಶ್ರೀಧರ್ ಮಾತನಾಡಿ, ಎಸ್ಐಆರ್ ನಡೆಸುವ ಪ್ರಕ್ರಿಯೆ ದೊಡ್ಡದು. ಇಂತಹ ದೊಡ್ಡ ಪ್ರಕ್ರಿಯೆ ನಡೆಸುವಾಗ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಜಾಗೃತಿಯೇ ಮೂಡಿಸಿಲ್ಲ. ಎನ್ಯುಮರೇಷನ್ ಫಾರ್ಮ್ನ್ನು ಸರಿಯಾಗಿ ಹಂಚಿಲ್ಲ. ಹಾಗೇಯೆ ಅದನ್ನು ಸರಿಯಾಗಿ ಸಂಗ್ರಹಿಸಿಲ್ಲ. ಇಡೀ ಎಸ್ಐಆರ್ ಪ್ರಕ್ರಿಯೆಯನ್ನು ನಾವು ಒಪ್ಪುವುದಿಲ್ಲ. ಆದ್ದರಿಂದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಹೋರಾಟಗಾರರಾದ ವೀರಸಂಗಯ್ಯ, ಕೆ.ಎಲ್.ಅಶೋಕ್ ಮತ್ತಿತರರು ಭಾಗವಹಿಸಿದ್ದರು.






