ಆರೆಸ್ಸೆಸ್ ನಿಷೇಧ ಕುರಿತ ಹೇಳಿಕೆ | ಭಸ್ಮ ಆಗುತ್ತಾರೆ ಎನ್ನುವ ಸದಾನಂದಗೌಡ ಶಿವ, ವಿಷ್ಣುನಾ? : ಚಲುವರಾಯಸ್ವಾಮಿ
"ರವಿಕುಮಾರ್ ಹೇಳಿಕೆಯನ್ನು ಬಿಜೆಪಿ ನಾಯಕರು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ"

ಎನ್.ಚಲುವರಾಯಸ್ವಾಮಿ
ಬೆಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ನಿಷೇಧ ವಿಚಾರಕ್ಕೆ ಬಂದರೆ ಭಸ್ಮ ಆಗುತ್ತಾರೆ ಎನ್ನುವ ಮಾಜಿ ಸಿಎಂ ಸದಾನಂದಗೌಡ ಹೇಳಿಕೆ ಅಸಂಬದ್ಧ. ಅಲ್ಲದೇ ಅವರೇನು ಶಿವನಾ? ಅಥವಾ ವಿಷ್ಣುನಾ?. ನಾವೆಲ್ಲ ಭಸ್ಮ ಆಗಲು ಎಂದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.
ಶನಿವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರೆಸ್ಸೆಸ್ ನಿಷೇಧ ವಿಚಾರಕ್ಕೆ ಬಂದರೆ ಭಸ್ಮ ಆಗುತ್ತಾರೆ ಎಂದು ಸದಾನಂದಗೌಡ ಹೇಳಿದ್ದಾರೆ.ಆದರೆ, ಅವರೇನು ಶಿವನಾ? ಅಥವಾ ವಿಷ್ಣುನಾ?.ಇಲ್ಲ, ಈ ರೀತಿಯ ಶಕ್ತಿಯನ್ನು ಸದಾನಂದಗೌಡರು ಏನಾದರು ಪಡೆದುಕೊಂಡಿದ್ದರಾ?. ಪಾಪ ಸದಾನಂದಗೌಡರು ತಿಳಿದುಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಸಚಿವ ಪ್ರಿಯಾಂಕ್ ಖರ್ಗೆ ಆರೆಸ್ಸೆಸ್ ನಿಷೇಧಿಸುತ್ತೇವೆ ಎಂಬ ಹೇಳಿಕೆ ನೀಡಿರುವುದು ಆರೆಸ್ಸೆಸ್ ಚಟುವಟಿಕೆ ಆರೋಗ್ಯಕರ ಇರಲಿ ಎಂಬ ಉದ್ದೇಶದಿಂದ ಮಾತ್ರ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಲಿ, ನಾನು ಸಹ ನಿಷೇಧ ಕುರಿತು ಮಾತನಾಡಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಯೂ ಇಲ್ಲ ಎಂದರು.
ಬಿಜೆಪಿ ನಾಯಕ ರವಿಕುಮಾರ್ ಮಹಿಳಾ ಅಧಿಕಾರಿಗಳ ಕುರಿತ ಹೇಳಿಕೆ ಒಪ್ಪುವಂತ ಮಾತೇ ಇಲ್ಲ. ಇದನ್ನು ಬಿಜೆಪಿ ನಾಯಕರು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ಅಲ್ಲದೆ, ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಈ ರೀತಿ ಮಾತನಾಡುತ್ತಿದ್ದಾರೆ. ಕೇಂದ್ರ ಸಚಿವ ಜೋಶಿ, ಬಿಜೆಪಿ ರಾಜ್ಯಾದ್ಯಕ್ಷ ಬಿ ವೈ ವಿಜಯೇಂದ್ರ, ಆರ್.ಅಶೋಕ್ ಅವರು ರವಿಕುಮಾರ್ ಹೇಳಿಕೆಯನ್ನು ಖಂಡಿಸಿಲ್ಲ ಎಂದು ಅವರು ಹೇಳಿದರು.