ರಾಜ್ಯ ನಾಯಕತ್ವದಲ್ಲಿ ಬದಲಾವಣೆ ವಿಚಾರ : ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು ?

ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿರುವ ನಡುವೆಯೇ, ಸಿಎಂ ಸಿದ್ದರಾಮಯ್ಯ ಜೊತೆ ದೆಹಲಿಗೆ ತೆರಳಿದ್ದ ಗೃಹ ಸಚಿವ ಜಿ.ಪರಮೇಶ್ವರ್ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ದೆಹಲಿಯ ಇಂದಿರಾ ಭವನದಲ್ಲಿ ಹೈಕಮಾಂಡ್ ನಾಯಕರು ನಡೆಸಿದ ಸರಣಿ ಸಭೆಗಳ ಬಳಿಕ, ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಗೊಂದಲಕ್ಕೆ ತೆರೆ ಬೀಳಲಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎನ್ನುವ ವದಂತಿಯೂ ಭಾರೀ ಚರ್ಚೆಗೆ ಕಾರಣವಾಗಿತ್ತು.
ಈ ನಡುವೆ ದೆಹಲಿಯಿಂದ ಮರಳಿದ ಪರಮೇಶ್ವರ್ ಅವರು ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, “ಮೀಟಿಂಗ್‌ನಲ್ಲಿ ಏನು ಚರ್ಚೆ ಆಯ್ತು ಅನ್ನೋದು ನನಗೆ ಗೊತ್ತಿಲ್ಲ. ಒಳಗೆ ನಡೆದ ಮಾತುಕತೆ ಬಗ್ಗೆ ಮಾಹಿತಿ ಇಲ್ಲ,” ಎಂದು ಹೇಳಿದ್ದಾರೆ.
ಈಗಾಗಲೇ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ನಿನ್ನೆ ಸುರ್ಜೇವಾಲ ಪರಿಷತ್ ಹಾಗೂ ರಾಜ್ಯಸಭೆ ಅಭ್ಯರ್ಥಿಗಳ ಚರ್ಚೆ ಬಗ್ಗೆ ಹೇಳಿದಷ್ಟು ನಮಗೂ ಗೊತ್ತು. ಇಂದು ಸುರ್ಜೇವಾಲ ಮತ್ತು ಕೆ. ಸಿ. ವೇಣುಗೋಪಾಲ್ ಅವರು ರಾಜ್ಯಕ್ಕೆ ಬರುತ್ತಿದ್ದಾರೆ. ಅವರು ಏನು ಘೋಷಣೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ.






