ಕೇಂದ್ರ ಸಚಿವ ಮನೋಹರ್ ಲಾಲ್ ಕಟ್ಟರ್‌ರನ್ನು ಭೇಟಿಯಾದ ಸಿಎಂ ಡಿ.ಕೆ.ಶಿವಕುಮಾರ್

ಹೊಸದಿಲ್ಲಿ : ಕೇಂದ್ರ ಸರಕಾರದ ಅರ್ಬನ್ ಚಾಲೆಂಜ್ ಫಂಡ್(ಯುಸಿಎಫ್) ಅಡಿಯಲ್ಲಿ ರಾಜ್ಯದ 13,549.60 ಕೋಟಿ ರೂ.ಗಳ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಕಟ್ಟರ್ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಬುಧವಾರ ಹೊಸದಿಯಲ್ಲಿ ಕೇಂದ್ರ ಸಚಿವ ಮನೋಹರ್ ಲಾಲ್ ಕಟ್ಟರ್ ಅವರನ್ನು ಭೇಟಿಯಾದ ಅವರು, ನಗರ ಯೋಜನೆಗಳನ್ನು ಬೆಂಬಲಿಸಲು ಭಾರತ ಸರಕಾರವು ಅರ್ಬನ್ ಚಾಲೆಂಜ್ ಫಂಡ್(ಯುಸಿಎಫ್) ರೂಪದಲ್ಲಿ ಕೈಗೊಂಡಿರುವ ಹೊಸ ಉಪಕ್ರಮ ಶ್ಲಾಘನೀಯ. ನಮ್ಮ ರಾಜ್ಯವು 13,549.60 ಕೋಟಿ ರೂ. ಪ್ರಸ್ತಾವನೆಗಳನ್ನು ಸಲ್ಲಿಸಿದ್ದು, ಇವು ಯೋಜನೆಯ ಅನುಷ್ಠಾನದ ಮುಂದುವರಿದ ಹಂತದಲ್ಲಿವೆ ಮತ್ತು ಯುಸಿಎಫ್ ಅಡಿಯಲ್ಲಿ ಅರ್ಹವಾಗಿವೆ ಎಂದು ತಿಳಿಸಿದ್ದಾರೆ.
ಯೋಜನೆಗಳು: ಎಲಿವೇಟೆಡ್ ಕಾರಿಡಾರ್ (ವರ್ಗ ಸಿ ಕಾರಿಡಾರ್‍ಗಳು)-6,287.57 ಕೋಟಿ ರೂ., 9 ಹೊಸ ಒಳಚರಂಡಿ ಸಂಸ್ಕರಣಾ ಘಟಕಗಳ ನಿರ್ಮಾಣ-1,350 ಕೋಟಿ ರೂ., ಪೆರಿಫೆರಲ್ ವರ್ತುಲ ರಸ್ತೆ- 3893 ಕೋಟಿ ರೂ., ಪೆರಿಫೆರಲ್ ವರ್ತುಲ ರಸ್ತೆ ಪ್ಯಾಕೇಜ್ 2-2,019 ಕೋಟಿ ರೂ.ಗಳು ಸೇರಿ ಒಟ್ಟು 13,549.60 ಕೋಟಿ ರೂ.ಗಳು ಎಂದು ಮುಖ್ಯಮಂತ್ರಿ ವಿವರಿಸಿದ್ದಾರೆ.
ಈ ಪ್ರಸ್ತಾವಿತ ಯೋಜನೆಗಳಲ್ಲಿ, ರಾಷ್ಟ್ರೀಯ ಅಪೆಕ್ಸ್ ಸಮಿತಿಯು ತನ್ನ ಮೊದಲ ಸಭೆಯಲ್ಲಿ ಮಡಿವಾಳ, ಬೆಳ್ಳಂದೂರು, ಕಾಡುಬೀಸನಹಳ್ಳಿ, ಕೋರಮಂಗಲ, ಬೈರಮಂಗಲ ಮತ್ತು 6 ಎಸ್‍ಟಿಪಿಗಳ ನಿರ್ಮಾಣ ಎಂಬ ಹೆಸರಿನಲ್ಲಿ ಯೋಜನೆಯನ್ನು ಅನುಮೋದಿಸಿದೆ. ಮೈಲಸಂದ್ರ ಯೋಜನೆಯ ವೆಚ್ಚ 1350 ಕೋಟಿ ರೂ.ಗಳಾಗಿದ್ದು, ಕೇಂದ್ರ ನೆರವು 337.50 ಕೋಟಿ ರೂ.ಗಳಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತ ಸರಕಾರದ ಅನುಮೋದನೆಗಾಗಿ ಬಾಕಿ ಇರುವ ಡಬಲ್ ಡೆಕ್ಕರ್ ಯೋಜನೆಗೆ ಅನುಮತಿ: ಮೆಟ್ರೋ ಮೂರನೇ ಹಂತ ಯೋಜನೆಯಲ್ಲಿ 44.65 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೆಲ್ಸೇತುವೆ ನಿರ್ಮಾಣಕ್ಕೆ ಬಿಎಂಆರ್‍ಸಿಎಲ್ ಮುಂದಾಗಿದ್ದು, 2024ರ ಸೆ.13ರಂದು ಕೇಂದ್ರ ಸರಕಾರ ಇದಕ್ಕೆ ಅನುಮತಿ ನೀಡಿತ್ತು. ಈ ಯೋಜನೆಯ ವೆಚ್ಚ 9,700 ಕೋಟಿ ರೂ.ಗಳನ್ನು ರಾಜ್ಯ ಸರಕಾರವೆ ಭರಿಸಲಿದೆ. ಪ್ರಸಕ್ತ ಸಾಲಿನ ಜ.19ರಂದು ಬಿಎಂಆರ್‍ಸಿಎಲ್ ಮಂಡಳಿಯ 118ನೆ ಸಭೆಯಲ್ಲಿ ಸಣ್ಣ ಬದಲಾವಣೆ ಪ್ರಸ್ತಾಪ ಮಾಡಿದ್ದು, ಕೇಂದ್ರ ಸರಕಾರ ಈ ಯೋಜನೆಯನ್ನು ಆರಂಭಿಸಲು ಬಿಎಂಆರ್‍ಸಿಎಲ್ ಗೆ ಅನುಮತಿ ನೀಡಬೇಕು ಎಂದು ಮುಖ್ಯಮಂತ್ರಿ ಕೋರಿದ್ದಾರೆ.
ಮೆಟ್ರೋ ಎರಡನೇ ಹಂತದ ಪರಿಷ್ಕೃತ ಯೋಜನಾ ವೆಚ್ಚಕ್ಕೆ ಅನುಮತಿ: ಈ ಯೋಜನೆಗೆ ಕೇಂದ್ರ ಸರಕಾರ 2014ರ ಫೆ.21ರಂದು 26,405.14 ಕೋಟಿ ರೂ. ಅಂದಾಜು ವೆಚ್ಚಕ್ಕೆ ಅನುಮತಿ ನೀಡಿತ್ತು. 72.095 ಕಿ.ಮೀ ಉದ್ದ ಹಾಗೂ 61 ನಿಲ್ದಾಣಗಳನ್ನು ಒಳಗೊಂಡಿರುವ ಈ ಯೋಜನೆ ಅಂದಾಜು ವೆಚ್ಚ ಈಗ 40,425.02 ಕೋಟಿ ರೂ.ಗೆ ಅಂದರೆ 14,019.88 ಕೋಟಿ ರೂ. ಏರಿಕೆ ಮಾಡಲಾಗಿದ್ದು, ಆದಷ್ಟು ಬೇಗ ಈ ಪರಿಷ್ಕೃತ ಯೋಜನಾ ವೆಚ್ಚಕ್ಕೆ ಕೇಂದ್ರ ಸರಕಾರ ಅನುಮತಿ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಮೆಟ್ರೋ ಮೂರನೇ ಎ ಹಂತಕ್ಕೆ ಅನುಮತಿ: ಈ ಯೋಜನೆ ಸರ್ಜಾಪುರದಿಂದ ಹೆಬ್ಬಾಳದವರೆಗೆ ಒಟ್ಟು 37.804 ಕಿ.ಮೀ (14.28 ಕಿ.ಮೀ ಸುರಂಗ ಹಾಗೂ 23.524 ಕಿ.ಮೀ ಮೇಲ್ಸೇತುವೆ) ಉದ್ದವಿದ್ದು, ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ಕೆಲವು ಮಾರ್ಪಾಡು ಮಾಡಲಾಗಿದ್ದು, 25,999 ಕೋಟಿ ರೂ. ಅಂದಾಜು ವೆಚ್ಚದ ಪರಿಷ್ಕೃತ ಡಿಪಿಆರ್ ಅನ್ನು ಪ್ರಸಕ್ತ ಸಾಲಿನ ಎ.29ರಂದು ಕೇಂದ್ರ ಸರಕಾರಕ್ಕೆ ಸಲ್ಲಿಕೆ ಮಾಡಲಾಗಿದ್ದು, ಆದಷ್ಟು ಬೇಗ ಇದಕ್ಕೆ ಅನುಮತಿ ನೀಡಬೇಕು ಎಂದು ಶಿವಕುಮಾರ್ ಕೋರಿದ್ದಾರೆ.
ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (ಆರ್ ಆರ್‍ಟಿಎಸ್) ಜಾರಿಗೆ ಅನುಮತಿ: ಬೆಂಗಳೂರು- ಮೈಸೂರು, ಬೆಂಗಳೂರು-ಕನಕಪುರ, ಬೆಂಗಳೂರು-ತುಮಕೂರು, ಬೆಂಗಳೂರು- ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು-ಕೋಲಾರ ನಡುವೆ ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (ಆರ್‌ಆರ್‍ಟಿಎಸ್) ಜಾರಿಗೆ ಅನುಮತಿ ನೀಡಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಹೊಸದಿಲ್ಲಿಯಲ್ಲಿನ ರಾಜ್ಯ ಸರಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಉಪಸ್ಥಿತರಿದ್ದರು.






