ಐಪಿಎಸ್ ಅಧಿಕಾರಿ ಸುಮನ್ ಡಿ. ಪನ್ನೇಕರ್ ಸಹಿತ 153 ಪೊಲೀಸರಿಗೆ ಮುಖ್ಯಮಂತ್ರಿ ಪದಕ

ಸುಮನ್ ಡಿ. ಪನ್ನೇಕರ್ (File Photo)
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಸಾಧಾರಣ ಸೇವೆ ಹಾಗೂ ದಕ್ಷತೆ ತೋರಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ 2025ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟವಾಗಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಐಪಿಎಸ್ ಮಹಿಳಾ ಅಧಿಕಾರಿ ಸುಮನ್ ಡಿ. ಪನ್ನೇಕರ್ ಸಹಿತ ಆರು ಮಂದಿ ಐಪಿಎಸ್ ಅಧಿಕಾರಿಗಳು ಒಳಗೊಂಡಂತೆ 153 ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.
ಪೊಲೀಸ್ ಇಲಾಖೆ ಕಳುಹಿಸಿದ್ದ ಅರ್ಹ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ಪ್ರಸ್ತಾವಕ್ಕೆ ರಾಜ್ಯ ಸರಕಾರ ಶುಕ್ರವಾರ(ಮಾ.27) ಅನುಮೋದನೆ ನೀಡಿದೆ. ಎ.2ರಂದು ಬೆಂಗಳೂರಿನಲ್ಲಿ ಪುರಸ್ಕೃತ ಪೊಲೀಸ್ ಅಧಿಕಾರಿಗಳಿಗೆ ಪದಕ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪದಕ ಪುರಸ್ಕೃತರ ವಿವರ:
ಐಪಿಎಸ್ ಅಧಿಕಾರಿಗಳಾದ ಡಾ.ಸುಮನ್ ಡಿ.ಪನ್ನೇಕರ್, ಡಾ.ಕೆ.ಅರುಣ್, ಪೃಥ್ವಿಕ್ ಶಂಕರ್, ಡಾ.ಗೋಪಾಲ ಎಂ.ಬ್ಯಾಕೋಡ, ಎಂ.ಕೆ.ತಮ್ಮಯ್ಯ, ಎಸ್.ರಮೇಶ್ ಕುಮಾರ್ ಮತ್ತು 12 ಮಂದಿ ಡಿವೈಎಸ್ಪಿ ಸೇರಿದಂತೆ ಒಟ್ಟು 153 ಮಂದಿ ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿ ಪದಕಕ್ಕೆ ಅರ್ಹರಾಗಿದ್ದಾರೆ.
ಪದಕ ಪುರಸ್ಕೃತರು ನಿಗದಿತ ಸಮವಸ್ತ್ರ ಧರಿಸಿ ಸಮಾರಂಭದಲ್ಲಿ ಭಾಗವಹಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ತಿಳಿಸಿದ್ದಾರೆ.







