ಪ್ರಾಸಿಕ್ಯೂಷನ್ಗೆ ಅನುಮತಿ ವಿಚಾರ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಬೆಂಬಲ ಘೋಷಿಸಿದ ದಸಂಸ

ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಿ(ಮುಡಾ) ನಿವೇಶನ ಹಂಚಿಕೆ ಪ್ರಕರಣ ಸಂಬಂಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೊಳ್ಳುವ ಕಾನೂನು ಹೋರಾಟಕ್ಕೆ ‘ಡಾ.ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟ’ ನೈತಿಕ ಬೆಂಬಲವನ್ನು ಘೋಷಿಸಿದೆ.
ರವಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಒಕ್ಕೂಟದ ಪದಾಧಿಕಾರಿಗಳಾದ ಅಣ್ಣಯ್ಯ, ಶ್ರೀಧರ ಕಲಿವೀರ, ಎಂ.ಗುರುಮೂರ್ತಿ, ಗೋವಿಂದರಾಜು, ಸಿದ್ದರಾಮಯ್ಯ ಮುಡಾ ಬದಲಿ ನಿವೇಶನ ಪ್ರಕರಣದಲ್ಲಿ ಭ್ರಷ್ಟಾಚಾರ, ಕಾನೂನು ಬಾಹಿರವಾಗಿ ಯಾವುದೇ ಅಕ್ರಮ ಎಸಗಿಲ್ಲ. ಈ ಕುರಿತು ಯಾವುದೇ ರೀತಿಯ ಸಾಕ್ಷ್ಯಾಧಾರಗಳು ಇಲ್ಲ. ಇದೆಲ್ಲವೂ ಮನುವಾದಿಗಳ ಷಡ್ಯಂತ್ರವಾಗಿದೆ ಎಂದು ದೂರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೆ ಕಾರಣಕ್ಕೂ ರಾಜೀನಾಮೆ ನೀಡಬಾರದು. ರಾಜ್ಯಪಾಲರ ಸಂವಿಧಾನ ವಿರೋಧಿ ನಿಲುವನ್ನು ದಸಂಸ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ, ರಾಜ್ಯಾದ್ಯಂತ ಒಕ್ಕೂಟ, ಅಹಿಂದ ಸಂಘಟನೆಗಳು ನಡೆಸುವ ಹೋರಾಟದಲ್ಲಿಯೂ ಪಾಲ್ಗೊಳ್ಳಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





