ದ್ವಿಭಾಷಾ ಸೂತ್ರ ಜಾರಿಗೊಳಿಸುವ ದಿಕ್ಕಿನಲ್ಲಿ ಪ್ರಯತ್ನ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿ ಮಾಡುವುದು ನನ್ನ ಅಭಿಪ್ರಾಯವಾಗಿದ್ದು, ಇದನ್ನು ಸರಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಶನಿವಾರ ಇಲ್ಲಿನ ಕಬ್ಬನ್ ಪಾರ್ಕ್‍ನಲ್ಲಿರುವ ಎನ್‍ಜಿಒ ಸಭಾಂಗಣದಲ್ಲಿ ‘ಜನ ಪ್ರಕಾಶನ’ದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಸಂಪಾದಕತ್ವದ ‘ಕುವೆಂಪು ವಿಚಾರ ಕ್ರಾಂತಿ’ ಕೃತಿಯನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.
ವೈಚಾರಿಕತೆ, ವೈಜ್ಞಾನಿಕತೆಯ ಬಗ್ಗೆ ಕುವೆಂಪು ಅವರಿಗೆ ಸ್ಪಷ್ಟ ದೃಷ್ಟಿಕೋನ ಇತ್ತು. ಜಾತಿ ತಾರತಮ್ಯ ಇಲ್ಲದ ಸಮಾಜ ಕುವೆಂಪು ಅವರ ಆಶಯವಾಗಿತ್ತು. ಆದರೆ, ಇಂದು ಶಿಕ್ಷಣ ಹೆಚ್ಚಾದಷ್ಟೂ ಮೌಢ್ಯ, ಕಂದಾಚಾರ ಹೆಚ್ಚಾಗುತ್ತಿದೆ. ವೈಜ್ಞಾನಿಕ ಪ್ರಜ್ಞೆ ಕ್ಷೀಣಿಸುತ್ತಿದೆ. ನಮ್ಮ ಸಂವಿಧಾನದಲ್ಲಿ ಕುವೆಂಪು, ಬಸವಣ್ಣ ಅವರ ಆಶಯಗಳೂ ಅಡಕವಾಗಿವೆ. ಆದರೆ ಸಂವಿಧಾನದ ಮೌಲ್ಯ ಮತ್ತು ಮಹತ್ವ ಅರಿಯುವ ಕೆಲಸ ಹೆಚ್ಚಾಗಬೇಕು. ಈ ಉದ್ದೇಶದಿಂದಲೇ ಸಂವಿಧಾನ ಓದು, ಸಂವಿಧಾನ ಪೀಠಿಕೆ ಅಭಿಯಾನವನ್ನು ನಾವು ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ರಾಜಕಾರಣಿಯಾಗಿ ನನಗೆ ಕೆಲವು ಮಿತಿಗಳು ಇರುತ್ತವೆ. ಸಮಾಜದ ನಂಬಿಕೆಗಳ ಜೊತೆಗೂ ನಾವು ಕೆಲವೊಮ್ಮೆ ನಡೆಯಬೇಕಾಗುತ್ತದೆ. ನಾನು ದೇವಸ್ಥಾನಕ್ಕೆ ಹೋದಾಗ ಕುಂಕಮ ಇಡುತ್ತಾರೆ. ಕುಂಕುಮ ಇಟ್ಟಿದ್ದಕ್ಕೂ ಕತೆ ಕಟ್ಟುತ್ತಾರೆ. ನಾವು ಗ್ರಾಮೀಣ ಭಾಗಕ್ಕೆ ಹೋದಾಗ ದೇವಸ್ಥಾನಗಳಿಗೆ ಹೋಗದಿದ್ದರೆ, ನಮ್ಮ ಬಗ್ಗೆ ಬೇರೆಯದೇ ರೀತಿಯ ಕತೆ ಕಟ್ಟುತ್ತಾರೆ. ಈ ಕತೆಯನ್ನು ಕೆಲವು ಜನರೂ ನಂಬುವುದರಿಂದ ನಮಗೆ ಮತಗಳೇ ಬರುವುದಿಲ್ಲ ಎಂದು ಅವರು ವಿವರಿಸಿದರು.
ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದೇ ಹೋದರೆ ಕೇವಲ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ. ಈ ಕಾರಣಕ್ಕೇ ಮೌಡ್ಯ ನಿಷೇಧ ಕಾಯ್ದೆ ಪರಿಣಾಮಕಾರಿ ಆಗುವುದಿಲ್ಲ. ನಾವು ಏನೇ ಕಾನೂನು, ನಿಯಮ ಮಾಡಿದರೂ ಸಂವಿಧಾನದ ಚೌಕಟ್ಟಿಗೇ ಒಳಪಟ್ಟರಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶ ಎಚ್.ಎನ್.ನಾಗಮೋಹನದಾಸ್ ಮಾತನಾಡಿ, ಇಂದು ಸಂವಿಧಾನ ತತ್ವಗಳಿಗೆ ಧಕ್ಕೆಯಾಗುತ್ತಿದೆ. ಸಂವಿಧಾನ ಪೀಠಿಕೆಯಲ್ಲಿ ಸಮಾಜವಾದ ಮತ್ತು ಜಾತ್ಯತೀತ ಪದಗಳನ್ನು ತೆಗೆಯಬೇಕು ಎಂದು ಇತ್ತೀಚೆಗೆ ಚರ್ಚೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂವಿಧಾನದ ವಿಧಿಗಳನ್ನು ಸಂವಿಧಾನದ ಪೀಠಿಕೆಯ ಅಡಿಯಲ್ಲಿಯೇ ವ್ಯಾಖ್ಯಾನ ಮಾಡಬೇಕು ಎಂದು ಅನೇಕ ಬಾರಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೂ ಪೀಠಿಕೆಯಲ್ಲಿ ಸಮಾಜವಾದ ಮತ್ತು ಜಾತ್ಯತೀತ ಪದಗಳನ್ನು ತೆಗೆಯಬೇಕು ಎಂದು ಹೇಳುವುದು ಸರಿಯಲ್ಲ. ಸಂವಿಧಾನದ ಮೂಲ ವ್ಯಾಖ್ಯಾನಗಳನ್ನು ಅಪಪ್ರಚಾರ ಮಾಡುತ್ತಿದ್ದು, ಇದನ್ನು ತಡೆಯಬೇಕಿದೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಇಂದು ಸಂವಿಧಾನ ಸಾಕ್ಷರತೆ ಅಗತ್ಯತೆ ಇದೆ. ಎಲ್ಲ ಎಂಎಲ್‍ಎ, ಎಂಪಿಗಳು ಸೇರಿದಂತೆ ಜನಪ್ರತಿನಿಧಿಗಳಿಗೆ ಸಂವಿಧಾನದ ಸಾಕ್ಷರತೆಯನ್ನು ತಿಳಿಸಬೇಕು. ಜನ ಸಾಮಾನ್ಯರಿಗೂ ತಿಳಿಸಬೇಕು. ಹೀಗಾಗಿ ಸಂವಿಧಾನ ಸಾಕ್ಷರತೆಗಾಗಿ ಒಂದು ಸಂಸ್ಥೆಯನ್ನು ರಚನೆ ಮಾಡಬೇಕು ಎಂದು ಅವರು ಹೇಳಿದರು.
ಸಾಹಿತಿ ನಾಡೋಜ ಡಾ. ಹಂ.ಪ.ನಾಗರಾಜಯ್ಯ ಮಾತನಾಡಿ, ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ಪದ್ದತಿಯನ್ನು ಜಾರಿಗೆ ತರಬೇಕು. ಆಗ ಭಾಷೆಗಳ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ದ್ವೇಷೋತ್ಪಾದನೆ, ಭಯೋತ್ಪಾದನೆ ಕಾಲಘಟ್ಟದಲ್ಲಿ ನಾವು ಇದ್ದೇವೆ. ಇಂತಹ ಸಂದರ್ಭದಲ್ಲಿ ನಾವು ಸಾಮರಸ್ಯದಿಂದ ಬದುಕುವುದು ಅತ್ಯಗತ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ, ಜನ ಪ್ರಕಾಶನದ ಬಿ. ರಾಜಶೇಖರಮೂರ್ತಿ, ಎಚ್.ಎನ್.ಹರಿ, ಎ.ವಿ.ಶ್ರೀಹರಿ ಉಪಸ್ಥಿತರಿದ್ದರು.