ʼಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಟಿಸ್ʼ ಕೇಂದ್ರ ಸರಕಾರವೇ ಹೊಣೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ‘ರಾಜ್ಯದಲ್ಲಿ ಸಣ್ಣ-ಪುಟ್ಟ ವ್ಯಾಪಾರಿಗಳಿಗೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯ ನೋಟಿಸ್ ನೀಡಿರುವ ಸಂಬಂಧ ರಾಜ್ಯ ಸರಕಾರಕ್ಕೆ ಯಾವುದೇ ಜವಾಬ್ದಾರಿಯೂ ಇಲ್ಲ. ಜಿಎಸ್ಟಿ ಕೌನ್ಸಿಲ್ ಕೇಂದ್ರ ಸರಕಾರದ ಅಧೀನದಲ್ಲಿ ಬರಲಿದ್ದು, ಇದಕ್ಕೆ ಕೇಂದ್ರ ಸರಕಾರವೇ ಹೊಣೆಯಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ರವಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯ ಕಾಯ್ದೆ ರಚನೆ ಮಾಡಿರುವುದು ಕೇಂದ್ರ ಸರಕಾರ. ಇದು ಯಾವುದೇ ಸಂದರ್ಭದಲ್ಲಿಯೂ ರಾಜ್ಯ ಸರಕಾರದ ಅಧೀನದಲ್ಲಿಲ್ಲ. ಹೀಗಾಗಿ ಕೇಂದ್ರ ಸರಕಾರವೇ ಹೊಣೆಯೇ, ಹೊರತು ರಾಜ್ಯ ಸರಕಾರವಲ್ಲ ಎಂದು ವಿವರಣೆ ನೀಡಿದರು.
ಬೀದಿಬದಿಯ ವ್ಯಾಪಾರಿಗಳು ಸೇರಿದಂತೆ ಸಣ್ಣಪುಟ್ಟ ವ್ಯಾಪಾರಿಗಳಿಗೆ ಅನುಕೂಲ ಮಾಡಲು ಯಾವುದಾದರೂ ಅವಕಾಶಗಳು ಇದ್ದರೆ ಅದರ ಬಗ್ಗೆ ರಾಜ್ಯ ಸರಕಾರದ ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇವೆ. ಈ ಸಂಬಂಧ ಕೇಂದ್ರದ ಜೊತೆಗೂ ಸಮಾಲೋಚನೆ ನಡೆಸಿ, ಸರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಇಲಾಖೆ ಗಮನಕ್ಕೆ ತನ್ನಿ: ‘ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ/ಸಿಬ್ಬಂದಿಗಳು ಯುಪಿಐ ಸಂಬಂಧಿಸಿದ ವಿಚಾರದಲ್ಲಿ ಲಂಚಕ್ಕಾಗಿ ಬೇಡಿಕೆ ಇಟ್ಟಿರುವ ಬಗ್ಗೆ ವರದಿಯಾಗಿದೆ. ಕೆಲವು ಮಧ್ಯವರ್ತಿಗಳು ವರ್ತಕರಿಗೆ ಸಹಾಯ ಮಾಡುವ ನೆಪದಲ್ಲಿ ಹಣಕ್ಕೆ ಬೇಡಿಕೆ ಇಟ್ಟಿರುವುದು ಇಲಾಖೆ ಗಮನಕ್ಕೆ ಬಂದಿದೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥ ಅಧಿಕಾರಿ/ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಬದ್ಧ. ಇಂತಹ ಪ್ರಕರಣಗಳನ್ನು ತಕ್ಷಣವೇ ವಾಣಿಜ್ಯ ತೆರಿಗೆ ಇಲಾಖೆ ಗಮನಕ್ಕೆ ತರಬೇಕೆಂದು ವ್ಯಾಪಾರಸ್ಥರಿಗೆ ಮನವಿ ಮಾಡಲಾಗಿದೆ. ದೂರವಾಣಿ ಸಂಖ್ಯೆ-1800 425 6300 ಸಂಪರ್ಕಿಸಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ.







