ಧರ್ಮಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ | ಕಾನೂನಿನ ಅನ್ವಯ ಕ್ರಮ : ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿದ್ದರಾಮಯ್ಯ
ಬೆಂಗಳೂರು : ಧರ್ಮಸ್ಥಳದಲ್ಲಿ ಯೂಟ್ಯೂಬರ್ಗಳ ಸಹಿತ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿರುವವರು ಯಾರೇ ಆಗಿದ್ದರೂ, ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಗುರುವಾರ ಲಾಲ್ಬಾಗ್ನ ಗಾಜಿನಮನೆಯಲ್ಲಿ ಸ್ವಾತಂತ್ರ್ಯೋತ್ಸವದ ದಿನಾಚರಣೆ ಅಂಗವಾಗಿ ಏರ್ಪಡಿಸಿರುವ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ವಿಷಯ ಆಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಚಿತ್ರೀಕರಣ ಮಾಡುತ್ತಿದ್ದವರ ವಿರುದ್ಧ ಅಪರಿಚಿತರಿಂದ ಹಲ್ಲೆಯಾಗಿದ್ದು, ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರತಿಭಟನೆ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಮತಗಳ್ಳತನ ಮಾಡಿದ್ದು, ಈ ಸಂಬಂಧ ನಾಳೆ(ಆ.8)ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು. ಮತಗಳ್ಳತನ ಖಂಡಿಸಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಹೋರಾಟಕ್ಕೆ ತೀರ್ಮಾನಿಸಿದ್ದಾರೆ. ಆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಊಟಕ್ಕೆ ಆಹ್ವಾನಿಸಿದ್ದು, ದಿಲ್ಲಿಗೆ ತೆರಳುತ್ತಿದ್ದೇನೆ ಎಂದು ಅವರು ತಿಳಿಸಿದರು.





