ಮಾನವ-ವನ್ಯಪ್ರಾಣಿ ಸಂಘರ್ಷ ತಪ್ಪಿಸಲು 8 ಅಂಶಗಳ ಯೋಜನೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಮಾನವ-ವನ್ಯಪ್ರಾಣಿ ಸಂಘರ್ಷ ತಪ್ಪಿಸಲು ದ್ರೋಣ್ ಕ್ಯಾಮರಾ ನಿಗಾ ಸೇರಿದಂತೆ ಅರಣ್ಯ ಇಲಾಖೆಯಲ್ಲಿ ಎಂಟು ಅಂಶಗಳ ಯೋಜನೆ ಜಾರಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿಲ್ಲಿ ಸೂಚನೆ ನೀಡಿದ್ದಾರೆ.
ಗುರುವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಕೃಪಾಕರ ಸೇನಾನಿ-ಸಂಜಯ್ ಗುಬ್ಬಿ ಸೇರಿದಂತೆ ತಜ್ಞರ ಜತೆಗೂಡಿ ವೈಜ್ಞಾನಿಕ ಮಾರ್ಗಗಳನ್ನು ರೂಪಿಸಲು ಸೂಚಿಸಿದ್ದು, ಅಗತ್ಯ ಸಿಬ್ಬಂದಿ, ಅನುದಾನ ಸೇರಿ ಎಲ್ಲ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ವಯಸ್ಸಾದ ಕಾರಣಕ್ಕೆ ಮತ್ತು ಹೊಸ ಯುವ ಹುಲಿಗಳ ದಾಳಿಯಿಂದ ಗಾಯಗೊಂಡ ಹಾಗೂ ಇನ್ನಿತರೆ ಕಾರಣಗಳಿಂದ ಅರಣ್ಯ ಪ್ರದೇಶದಿಂದ ಹೊರಗೆ ಸಂಚರಿಸುತ್ತಿರುವ 15-20 ಹುಲಿಗಳನ್ನು ದ್ರೋಣ್ ಕ್ಯಾಮರಾ ನೆರವಿನಿಂದ ತಕ್ಷಣ ಹಿಡಿಯಲು ಕ್ರಮ ಜರುಗಿಸಬೇಕು. ಈಗಾಗಲೇ ಎಂಟು ಕುಮ್ಕಿ ಆನೆಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ಮತ್ತು ಸ್ಕ್ಯಾಡ್‍ಗಳ ಸಂಖ್ಯೆಯನ್ನು ಸಂಘರ್ಷ ಪೀಡಿತ ಅರಣ್ಯ ಪ್ರದೇಶದಲ್ಲಿ ಬಳಸುವಂತೆ ಸೂಚನೆ ನೀಡಲಾಗಿದೆ ಎಂದರು.
ಮಾನವ ವನ್ಯಜೀವಿ ಸಂಘರ್ಷ ಇರುವ ಪ್ರದೇಶಗಳನ್ನು ಗುರುತಿಸುವುದು ಮತ್ತೆ ಯಾವ ಸ್ವರೂಪದ ಸಂಘರ್ಷ ಇದೇ ಎಂದು ಪಟ್ಟಿ ಮಾಡುವುದು. ಮಾನವ ಸಂಪನ್ಮೂಲದ ನಿರ್ವಹಣೆ ಸಂಘರ್ಷದ ತೀವ್ರತೆಯ ಆಧಾರದ ಮೇಲೆ ಅಧಿಕಾರಿ, ಸಿಬ್ಬಂದಿಯ ನಿಯೋಜನೆ. ಅರಣ್ಯದ ಅಂಚಿನ ಗ್ರಾಮಗಳಲ್ಲಿ ಗಸ್ತು ಹೆಚ್ಚಳ ಮಾಡುವುದು ಹಾಗೂ ರಿಜಿಸ್ಟರ್ ನಿರ್ವಹಣೆ ಮಾಡುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಿರಿಯ ಅಧಿಕಾರಿಗಳು ನಿಯಮಿತವಾಗಿ ಅರಣ್ಯದಂಚಿನ, ಅದರಲ್ಲೂ ಮಾನವ ವನ್ಯ ಜೀವಿ ಸಂಘರ್ಷ ಇರುವ ಗ್ರಾಮದಲ್ಲಿ ವಾಸ್ತವ್ಯ ಮಾಡಬೇಕು. ಸ್ಥಳೀಯರನ್ನು ತೊಡಗಿಸಿಕೊಳ್ಳುವುದು, ಅರಣ್ಯದಂಚಿನ ಗ್ರಾಮದ ಉತ್ಸಾಹಿ ಯುವಕರು ಮತ್ತು ಹಿರಿಯರನ್ನು ಗುರುತಿಸಿ ಅರಣ್ಯ ಮಿತ್ರ ಎಂದು ಪರಿಗಣಿಸಿ ಗಸ್ತು, ವನ್ಯಜೀವಿ, ಸೆರೆ, ಕಾರ್ಯಾಚರಣೆ ವೇಳೆ ಅವರ ಸೇವೆ ಬಳಸಿಕೊಳ್ಳಬೇಕು. ವನ್ಯಜೀವಿ ಸಂರಕ್ಷಣೆ ಕಾರ್ಯಾಚರಣೆಗೆ ವನ್ಯಜೀವಿಗಳು ಸಂಚರಿಸುವ ಕಾರ್ಯತಂತ್ರ ಸ್ಥಳಗಳಲ್ಲಿ ದಿನದ 24 ಗಂಟೆಯೂ ವಾಹನ ಮತ್ತು ಅರಣ್ಯ ಸಿಬ್ಬಂದಿ ಲಭ್ಯವಾಗುವಂತೆ ಮಾಡಲು ಹೇಳಲಾಗಿದೆ ಎಂದು ಅವರು ತಿಳಿಸಿದರು.
ವನ್ಯಜೀವಿ ಸೆರೆ, ವನ್ಯಜೀವಿ ದಾಳಿ ಮಾಡಿದಾಗ ಏನು ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡಲು ಅಣಕು ಪ್ರದರ್ಶನ ಏರ್ಪಡಿಸುವುದು. ತಾಲೂಕು ಮಟ್ಟದಲ್ಲಿ ಉಪಸಮಿತಿ ರಚನೆ ಮಾಡಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನೆರವು ಪಡೆಯುವುದು. ಈ ಸಮಿತಿ ನಿಯಮಿತವಾಗಿ ಸಭೆ ನಡೆಸಿ ಮಾನವ ವನ್ಯ ಜೀವಿ ಸಂಘರ್ಷ ನಿಯಂತ್ರಣಕ್ಕೆ ಶ್ರಮಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಸಭೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷÀ ನರೇಂದ್ರ ಸ್ವಾಮಿ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ವನ್ಯಜೀವಿ ಸಂಖ್ಯೆ
► ಆನೆಗಳ ಸಂಖ್ಯೆ-6395 (ದೇಶದಲ್ಲಿಯೇ ಮೊದಲ ಸ್ಥಾನ)
► ಹುಲಿ ಸಂಖ್ಯೆ-563 (ದೇಶದಲ್ಲಿಯೇ ಎರಡನೆ ಸ್ಥಾನ)
► ಚಿರತೆ ಸಂಖ್ಯೆ-1879 (ದೇಶದಲ್ಲಿ ಮೂರನೆ ಸ್ಥಾನ)
ಈ ಸಂಘರ್ಷ ಪ್ರಕೃತಿ ವಿಕೋಪದಂತೆ ಪರಿಗಣಿಸಿ: ಮಾನವ-ವನ್ಯಜೀವಿ ಸಂಘರ್ಷವನ್ನು ಪ್ರಕೃತಿ ವಿಕೋಪದ ರೀತಿ ಪರಿಗಣಿಸಲು ಮತ್ತು ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಸಹಯೋಗ ಒದಗಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ಸಭೆಯಲ್ಲಿ ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿದ್ದು 2022-23ರಲ್ಲಿ 57 ಜನರು, 2023-24ರಲ್ಲಿ 65 ಮತ್ತು 2024-25ರಲ್ಲಿ 46 ಹಾಗೂ 2025-26ರಲ್ಲಿ ಇಲ್ಲಿಯವರೆಗೆ 32 ಜನರು ಮಾನವ-ವನ್ಯಜೀವಿ ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕರ್ನಾಟಕಕ್ಕಿಂತ ವನ್ಯಜೀವಿಗಳ ಸಂಖ್ಯೆ ಕಡಿಮೆ ಇದ್ದರೂ ಜೀವಹಾನಿಯ ಸಂಖ್ಯೆ ಅಧಿಕವಾಗಿದೆ ಎಂದು ಸಭೆಗೆ ವಿವರಿಸಿದರು.
ಮಾನವ-ವನ್ಯಜೀವಿ ಸಂಘರ್ಷ ಇರುವ ಪ್ರದೇಶದಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ನಿವೃತ್ತ ಯೋಧರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಅರಣ್ಯ ಇಲಾಖೆಯಲ್ಲಿ ಪಶುವೈದ್ಯಕೀಯ ಇಲಾಖೆಯಿಂದ ನಿಯೋಜನೆಯ ಮೇಲೆ ಪಶುವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ವನ್ಯಜೀವಿ ಪಶುವೈದ್ಯರ ಪ್ರತ್ಯೇಕ ಕೇಡರ್ ರೂಪಿಸುವ ಅಗತ್ಯ ಇದೆ ಎಂದು ಉಲ್ಲೇಖಿಸಿದರು.







