ರಾಜ್ಯದ 4.50 ಲಕ್ಷ ಕೋಟಿ ರೂ. ತೆರಿಗೆಯಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ಕೇವಲ 79 ಸಾವಿರ ಕೋಟಿ ರೂ. : ಕೇಂದ್ರದ ವಿರುದ್ದ ಸಿಎಂ ಆಕ್ರೋಶ

ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ಕನ್ನಡಿಗರು ತಮ್ಮ ಬೆವರ ಗಳಿಕೆಯಿಂದ ನೀಡುವ ಒಂದು ರೂಪಾಯಿ ತೆರಿಗೆಗೆ ಪ್ರತಿಯಾಗಿ ಕೇಂದ್ರ ಸರಕಾರ ಹದಿನೈದು ಪೈಸೆ ಮಾತ್ರ ವಾಪಸ್ ನೀಡುತ್ತಿದೆ. ಇದನ್ನು ‘ತೆರಿಗೆ ಭಯೋತ್ಪಾದನೆ’ ಎನ್ನಲೇ? ‘ತೆರಿಗೆ ದರೋಡೆ’ ಎನ್ನಲೇ? ಈ ಪ್ರಶ್ನೆಗೆ ರಾಜ್ಯದ ಬಿಜೆಪಿ ನಾಯಕರು ಉತ್ತರಿಸುವ ಧೈರ್ಯ ಮಾಡುತ್ತಾರೆಯೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾರ ರಾಜ್ಯದಿಂದ 4.50 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಸಂಪನ್ಮೂಲವನ್ನು ತೆರಿಗೆ, ಸೆಸ್, ಸರ್ ಚಾರ್ಜ್ ಮೂಲಕ ಸಂಗ್ರಹಿಸಿದೆ. ಇದಕ್ಕೆ ಪ್ರತಿಯಾಗಿ ನೀಡಿದ್ದು 79 ಸಾವಿರ ಕೋಟಿ ಮಾತ್ರ ರೂ.ಗಳು ಮಾತ್ರ ಎಂದು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಹಲವಾರು ಬಾರಿ ಈ ‘ತೆರಿಗೆ ದರೋಡೆ’ಯನ್ನು ಕೇಂದ್ರ ಸರಕಾರದ ಗಮನಕ್ಕೆ ತಂದಿದ್ದೇವೆ. ದಿಲ್ಲಿಗೆ ಹೋಗಿ ಸಂಸತ್ ಭವನದ ಎದುರಿಗೆ ನಿಂತು ಈ ಅನ್ಯಾಯವನ್ನು ಕೂಗಿ ಕೂಗಿ ಹೇಳಿದ್ದೇವೆ. ಆಗ ಬಾಯಿ ಮುಚ್ಚಿಕೊಂಡು ಏಳು ಕೋಟಿ ಕನ್ನಡಿಗರಿಗೆ ದ್ರೋಹ ಬಗೆದಿರುವ ಈ ಬಸವರಾಜ ಬೊಮ್ಮಾಯಿ, ಆರ್.ಅಶೋಕ್ ಮೊದಲಾದ ಬಿಜೆಪಿ ನಾಯಕರು ಈಗ ನಮ್ಮ ವಿರುದ್ಧ ಕೂಗು ಹಾಕುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಗಾರಿದ್ದಾರೆ.
ಕರ್ನಾಟಕವು ಜಿಎಸ್ಟಿ ಸಂಗ್ರಹದಲ್ಲಿ ಇಂದು ಗಮನಾರ್ಹ ಸಾಧನೆ ಮಾಡಿದೆ. ಜಿಎಸ್ಟಿ ಸಂಗ್ರಹದಲ್ಲಿ ದೇಶದಲ್ಲಿಯೆ ಎರಡನೇ ಸ್ಥಾನದಲ್ಲಿದೆ. ಇನ್ನು ಜಿಎಸ್ಟಿ ಸಂಗ್ರಹದ ಬೆಳೆವಣಿಗೆ ದರವನ್ನು ಗಮನಿಸಿದರೆ ಶೇ.17ರ ಸಾಧನೆಯ ಮೂಲಕ ದೇಶದಲ್ಲೆ ಮೊದಲ ಸ್ಥಾನದಲ್ಲಿ ಕರ್ನಾಟಕವಿದೆ ಎಂದು ಅವರು ಹೇಳಿದ್ದಾರೆ.
ವಿಪರ್ಯಾಸವೆಂದರೆ ಈ ಪ್ರಮಾಣದಲ್ಲಿ ಜಿಎಸ್ಟಿ ಹಣವನ್ನು ಕೇಂದ್ರಕ್ಕೆ ಸಂಗ್ರಹಿಸಿ ನೀಡಿದರೂ ಇದರಿಂದ ರಾಜ್ಯಕ್ಕೆ ಮರಳಿ ದೊರೆಯುತ್ತಿರುವುದು ಶೇ.52 ಪಾಲು ಮಾತ್ರ. ಜಿಎಸ್ಟಿಯ ಅವೈಜ್ಞಾನಿಕ ಅನುಷ್ಠಾನದಿಂದಾಗಿ ಕರ್ನಾಟಕವು ಸಾವಿರಾರು ಕೋಟಿ ರೂಪಾಯಿ ಕಳೆದುಕೊಂಡಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
15ನೆ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ನ್ಯಾಯಬದ್ಧ ತೆರಿಗೆ ಪಾಲನ್ನು ನೀಡದೆ, ಕೇಂದ್ರ ಸರಕಾರ ವಿಧಿಸುವ ಸೆಸ್ಗಳು ಮತ್ತು ಸರ್ಚಾರ್ಜ್ಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡದೆ, ಜಿ.ಎಸ್.ಟಿ ಜಾರಿಯಿಂದ ರಾಜ್ಯಕ್ಕೆ ಆದ ನಷ್ಟವನ್ನು ಸರಿದೂಗಿಸಲು ಪರಿಹಾರ ನೀಡದೆ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅನುದಾನವನ್ನು ನೀಡದೆ ಕೇಂದ್ರ ಸರಕಾರವು ಕರ್ನಾಟಕ ಸರಕಾರವನ್ನು ಸಾಲ ಮಾಡಲೇಬೇಕಾದ ಅಸಹಾಯಕ ಪರಿಸ್ಥಿತಿಗೆ ತಳ್ಳಿದೆ ಎಂದು ಅವರು ದೂರಿದ್ದಾರೆ.
ತೆರಿಗೆ ಹಂಚಿಕೆ, ಜಿಎಸ್ಟಿ ಪರಿಹಾರ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ನೀಡುವ ಅನುದಾನದಲ್ಲಿ ಅನ್ಯಾಯ ಮಾಡದೆ ನಮಗೆ ಸಿಗಬೇಕಾದ ನ್ಯಾಯಬದ್ಧ ಸಂಪನ್ಮೂಲದ ಪಾಲನ್ನು ನೀಡಿದರೆ ಒಂದು ಪೈಸೆ ಸಾಲವನ್ನು ಮಾಡದೆ ರಾಜ್ಯದ ಆರ್ಥಿಕತೆಯನ್ನು ನಿರ್ವಹಿಸುವೆ. ಈ ಸವಾಲನ್ನು ಸ್ವೀಕರಿಸಲು ಬಿಜೆಪಿ ನಾಯಕರು ಸಿದ್ಧರಿದ್ದಾರಾ? ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಮಹಾರಾಷ್ಟ್ರದ ನಂತರ ಕೇಂದ್ರ ಸರಕಾರಕ್ಕೆ ಅತ್ಯಧಿಕ ಪ್ರಮಾಣದ ತೆರಿಗೆ ನೀಡುವ ರಾಜ್ಯ ನಮ್ಮದು. ದೇಶದ ಸಂಪತ್ತಿಗೆ ಕರ್ನಾಟಕವು ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಕೊಡುಗೆಯನ್ನು ನೀಡುತ್ತಲೆ ಬಂದರೂ ಕೇಂದ್ರದಿಂದ ಕರ್ನಾಟಕಕ್ಕೆ ದೊರೆಯಬೇಕಾದ ನ್ಯಾಯಯುತ ಪಾಲಿನಲ್ಲಿ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ನಮ್ಮ ಸರಕಾರ ಮಾಡಿರುವ ಸಾಲವನ್ನು ಅತಿರಂಜಿತವಾಗಿ ಬಣ್ಣಿಸುವ ಬಿಜೆಪಿ ನಾಯಕರಿಗೆ ಕೇಂದ್ರ ಸರಕಾರ ಪ್ರತಿಯೊಬ್ಬ ಭಾರತೀಯನ ತಲೆ ಮೇಲೆಹೊರಿಸಿರುವ ಸಾಲದ ಹೊರೆ ಕಾಣಿಸುವುದೆ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ 2014ರಲ್ಲಿ ಪ್ರಧಾನಿ ಪಟ್ಟಕ್ಕೇರಿದಾಗ ಇದ್ದ ದೇಶದ ಸಾಲದ ಮೊತ್ತ 51.06 ಲಕ್ಷ ಕೋಟಿ ರೂ.ಗಳು., 2026-27ನೆ ಸಾಲಿನ ಬಜೆಟ್ ನಲ್ಲಿ ಇದು 214 ಲಕ್ಷ ಕೋಟಿ ರೂ.ಗಳಿಗೆ ಏರಿದೆ. ಈ ಲೆಕ್ಕದ ಪ್ರಕಾರ ಪ್ರತಿಯೊಬ್ಬ ಭಾರತೀಯನ ತಲೆ ಮೇಲೆ 1.50 ಲಕ್ಷ ರೂ.ಗಳಷ್ಟು ಸಾಲದ ಹೊರೆ ಇದೆ. ಮೋದಿಯವರ ಸಾಲದ ಹೊರೆ ರಾಜ್ಯದ ಏಳು ಕೋಟಿ ಕನ್ನಡಿಗರ ತಲೆ ಮೇಲೆಯೂ ಇದೆ ಎನ್ನುವುದನ್ನು ಬೊಮ್ಮಾಯಿ ಮತ್ತು ಅಶೋಕ್ ತಿಳಿದುಕೊಂಡು ಮಾತನಾಡಲಿ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.







