ನಾಳೆ ದಾಖಲೆಯ 17ನೇ ಬಜೆಟ್ ಮಂಡನೆ ಮಾಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿದ್ದರಾಮಯ್ಯ
ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ, ಹಣಕಾಸು ಸಚಿವರು ಆಗಿರುವ ಸಿದ್ದರಾಮಯ್ಯ ಅವರು ಶುಕ್ರವಾರ (ಮಾ.6) ದಾಖಲೆಯ 17ನೇ ಆಯವ್ಯಯ ಮಂಡಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿ ಮಾಡಲಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಶಿಕ್ಷಣ, ಆರೋಗ್ಯ, ನೀರಾವರಿ, ಕೃಷಿ, ಮೂಲಸೌಕರ್ಯ, ವಿಜ್ಞಾನ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆ ಇದೆ.
ಶುಕ್ರವಾರ ಬೆಳಗ್ಗೆ 10:15 ಸುಮಾರಿಗೆ ವಿಧಾನಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-2027ನೆ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಹೊಸ ಯೋಜನೆಗಳು ಘೋಷಣೆಗಳನ್ನು ಮಾಡುವ ಜತೆಗೆ, ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುವ ಸಾಧ್ಯತೆಗಳಿವೆ.
ಕೃಷಿ ಇಲಾಖೆಯಲ್ಲಿ ರೈತ ಕಲ್ಯಾಣಕ್ಕೆ ಸಂಬಂಧಪಟ್ಟಂತೆ ಹಲವಾರು ಯೋಜನೆಗಳು ಚರ್ಚೆಯಾಗಿವೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಬಿಎ ಸೇರಿದಂತೆ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಇದೇ ವರ್ಷ ನಡೆಯುವುದರಿಂದಾಗಿ ಜನಪ್ರಿಯ ಯೋಜನೆಗಳು ಬಜೆಟ್ನಲ್ಲಿ ಘೋಷಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮ ಸಂಸ್ಥೆಗಳು ನಾನಾ ರೀತಿಯ ರಿಯಾಯಿತಿಗಳಿಗಾಗಿ ಪ್ರಸ್ತಾವನೆ ಸಲ್ಲಿಸಿವೆ. ಅವುಗಳನ್ನು ಪರಿಗಣಿಸುವುದು ಅಭಿವೃದ್ಧಿ ದೃಷ್ಟಿಯಿಂದ ಅತ್ಯಗತ್ಯ ಎಂಬ ಸಲಹೆ ಆರ್ಥಿಕ ಇಲಾಖೆಯಿಂದ ಕೇಳಿ ಬಂದಿದೆ. ತಮ್ಮ ಹಿಂದಿನ ಸರಕಾರದ ಬಜೆಟ್ಗಳಲ್ಲಿ ಪ್ರಮುಖವಾಗಿ ಅನ್ನಭಾಗ್ಯ ಯೋಜನೆ, ವಿದ್ಯಾರ್ಥಿಗಳಿಗೆ ವಿದ್ಯಾಸಿರಿ, ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆ, ಅಲ್ಪಸಂಖ್ಯಾತ ಸಮುದಾಯದ ಯುವತಿಯರಿಗೆ ಶಾದಿ ಭಾಗ್ಯ ಯೋಜನೆ, ಕೃಷಿ ಹೊಂಡ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಕಾಯ್ದೆ ಜಾರಿ ಸೇರಿ ಹಲವು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದ್ದರು. ಆ ಮೂಲಕ ಜನ ಕಲ್ಯಾಣ ಯೋಜನೆಗಳು, ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು.
ಸಾಲ ಆರೋಪ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಈವರೆಗೆ ಮಂಡಿಸಿದ 16 ಬಜೆಟ್ಗಳಲ್ಲಿ ಅಂದಾಜು ಒಟ್ಟು 4,91,358 ಕೋಟಿ ರೂ.ಸಾಲ ಮಾಡಿದ್ದಾರೆ. ಗರಿಷ್ಠ ಮಟ್ಟದಲ್ಲಿ ಸಾಲ ಮಾಡಿ ರಾಜ್ಯದ ಜನರ ಮೇಲಿನ ಸಾಲದ ಹೊರೆಯನ್ನು ಹೆಚ್ಚಿಸಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.
ತಮ್ಮ ಮೊದಲ ಬಜೆಟ್ 1995-96ರಲ್ಲಿ 1,309 ಕೋಟಿ ರೂ.ಸಾಲ ಮಾಡುವುದಾಗಿ ಅಂದಾಜಿಸಿದ್ದರು. 2025-26 ಸಾಲಿನಲ್ಲಿ ಮಂಡಿಸಿದ ಬಜೆಟ್ನಲ್ಲಿ ಅಂದಾಜು 1,16,000 ಕೋಟಿ ರೂ. ವಾರ್ಷಿಕ ಸಾಲ ಮಾಡುವುದಾಗಿ ಹೇಳಿದ್ದರು. ಅಂದರೆ ಅವರ ಈವರೆಗಿನ 16 ಬಜೆಟ್ನಲ್ಲಿ ವಾರ್ಷಿಕ ಸಾವಿರ ಕೋಟಿ ರೂ.ಸಾಲದ ಮೊತ್ತದಿಂದ ವಾರ್ಷಿಕ ಲಕ್ಷ ಕೋಟಿ ರೂ.ಗಳ ಗಡಿಯನ್ನು ದಾಟಿದೆ. ಮಿತಿ ಮೀರುತ್ತಿರುವ ವೆಚ್ಚ ಹೆಚ್ಚಳ, ಬದ್ಧ ವೆಚ್ಚ, ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಹಿನ್ನೆಲೆ ಸಾಲದ ಪ್ರಮಾಣ ಗಣನೀಯ ಏರಿಕೆ ಕಾಣುತ್ತಿದೆ.
ಸಿಎಂ ದಾಖಲೆ: ಎಚ್.ಡಿ.ದೇವೇಗೌಡ ಹಾಗೂ ಜೆ.ಎಚ್.ಪಟೇಲ್ ಆಡಳಿತದಲ್ಲಿ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಅವರು 1995-96ನೆ ಸಾಲಿನಲ್ಲಿ ಮೊದಲ ಮುಂಗಡ ಪತ್ರ ಮಂಡಿಸಿದ್ದರು. ಬಳಿಕ 1996-97, 1997-98, 1998-99, 2004-05, 2005-06ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದರು. ಬಳಿಕ ಮುಖ್ಯಮಂತ್ರಿಯಾಗಿ 2013-14, 2014-15, 2015-16, 2016-17, 2017-18, 2018-19, ಪ್ರಸಕ್ತ 2023-24, 2024-25, 2025-26 ಸಾಲಿನಲ್ಲಿ ಬಜೆಟ್ ಮಂಡಿಸಿದ್ದಾರೆ.
ಒಟ್ಟಾರೆ, ರಾಜ್ಯದ ಇತಿಹಾಸದಲ್ಲಿ ಅತಿಹೆಚ್ಚು ಬಜೆಟ್ ಮಂಡಿಸಿದ ಕೀರ್ತಿಗೆ ಸಿಎಂ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ. ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ ಒಟ್ಟು 7 ಬಜೆಟ್ ಮಂಡನೆ ಮಾಡಿದ್ದರೆ, ಮುಖ್ಯಮಂತ್ರಿಯಾಗಿ ಈವರೆಗೆ 9 ಬಜೆಟ್ ಮಂಡನೆ ಮಾಡಿದ್ದಾರೆ. 2023-24ರಲ್ಲಿ ಬಜೆಟ್ ಮಂಡನೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ರಾಮಕೃಷ್ಣ ಹೆಗಡೆಯವರ ಅತಿ ಹೆಚ್ಚು ಬಜೆಟ್ ಮಂಡನೆ ದಾಖಲೆಯನ್ನು ಮುರಿದಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಶುಕ್ರವಾರ(ಮಾ.6) 17ನೆ ಬಜೆಟ್ ಮಂಡನೆ ಮಾಡಲಿದ್ದಾರೆ.
ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಮಂಡಿಸಲಿರುವ 2026–27ನೆ ಸಾಲಿನ ರಾಜ್ಯದ ಆಯವ್ಯಯದ ಬಜೆಟ್ ಭಾಷಣವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯದ ಆಯ್ದ 280ಕ್ಕೂ ಅಧಿಕ ಬಸ್ ನಿಲ್ದಾಣಗಳಲ್ಲಿರುವ ಎಲ್ಇಡಿ ಮತ್ತು ಟಿವಿ ಪರದೆಗಳ ಮೂಲಕ ಮೊದಲ ಬಾರಿಗೆ ನೇರ ಪ್ರಸಾರ ಮಾಡುತ್ತಿದೆ.
ಆರ್ಥಿಕ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೆ ಬಾರಿ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸುತ್ತಿದ್ದಾರೆ. ಈ ಮಹತ್ವದ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ರಾಜ್ಯದ ಜನತೆಗೆ ತಲುಪಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್, ಪ್ರಕಟನೆಯಲ್ಲಿ ತಿಳಿಸಿದ್ದಾರೆ.






