ಚಿಲುಮೆ ಹಗರಣ: ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ತನಿಖೆಗೆ ರಾಜ್ಯ ಸರಕಾರ ಆದೇಶ

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಬೆಂಗಳೂರು, ಅ.3: ಈ ಹಿಂದೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೆಳಕಿಗೆ ಬಂದಿದ್ದ ಚಿಲುಮೆ ಸಂಸ್ಥೆ ಪ್ರಕರಣ ಸಂಬಂದ ಮತದಾರರ ಖಾಸಗಿ ಮಾಹಿತಿ ಸಂಗ್ರಹಕ್ಕೆ ಅವಕಾಶ ಮಾಡಿಕೊಡಲಾಗಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧ ತನಿಖೆ ಮಾಡಿ ವರದಿ ನೀಡಲು ರಾಜ್ಯ ಸರಕಾರ ಸೂಚಿಸಿದೆ.
ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಯೂ ಆಗಿದ್ದರು. ತುಷಾರ್ ಗಿರಿನಾಥ್ ಅವರು ಚಿಲುಮೆ ಸಂಸ್ಥೆಗೆ ಮತಪಟ್ಟಿ ಪರಿಷ್ಕರಣೆಗೆ ಅವಕಾಶ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜುಲೈ 3ರಂದು ಪತ್ರ ಬರೆದು ಮತದಾರರ ಖಾಸಗಿ ವಿಷಯ ಸಂಗ್ರಹಿಸಲು ಚಿಲುಮೆ ಸಂಸ್ಥೆಗೆ ಅವಕಾಶ ನೀಡಿ ಕರ್ತವ್ಯಲೋಪ ಎಸಗಿರುವ ಆರೋಪದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧ ಹಾಗೂ ಚಿಲುಮೆ ಸಂಸ್ಥೆಯ ಲೋಪದ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸುವಂತೆ ಕೋರಿದ್ದರು.
ಈ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿಗಳು ಸೂಕ್ತ ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದರು. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಚುನಾವಣಾ ಆಯೋಗಕ್ಕೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಕೋರಿದ್ದಾರೆ.
ಅಲ್ಲದೆ, ಮತದಾನದ ಬಗ್ಗೆ ಮತದಾರರಿಗೆ ಜಾಗೃತಿ ಮೂಡಿಸುವ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಚಿಲುಮೆ ಸಂಸ್ಥೆ ಬಿಎಲ್ಓ (ಬೂತ್ ಮಟ್ಟದ ಅಧಿಕಾರಿ) ಹೆಸರಿನಲ್ಲಿ ಗುರುತಿನ ಚೀಟಿಯನ್ನು ಸೃಷ್ಟಿಸಿಕೊಂಡು ಮತದಾರರ ಮನೆಗಳಿಗೆ ಹೋಗಿ ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕಿತ್ತು. ಅಲ್ಲದೆ ಈ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪ ಇದೆ.







