ಕಾನ್ಫಿಡೆಂಟ್ ಗ್ರೂಪ್ನ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ: ತನಿಖೆಗೆ ಎಸ್ಐಟಿ ರಚನೆ

ಸಿ.ಜೆ. ರಾಯ್ | Photo Credit : Instagram
ಬೆಂಗಳೂರು : ಕಾನ್ಫಿಡೆಂಟ್ ಗ್ರೂಪ್ನ ಅಧ್ಯಕ್ಷ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಗಾಗಿ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ರಾಜ್ಯ ಸರಕಾರವು ವಿಶೇಷ ತನಿಖಾ ತಂಡ(ಎಸ್ಐಟಿ) ರಚನೆ ಮಾಡಿದೆ.
ಈ ಸಂಬಂಧ ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಎಸ್ಐಟಿಯಲ್ಲಿ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್, ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್, ಹಲಸೂರು ಗೇಟ್ ಠಾಣೆಯ ಎಸಿಪಿ ಸುಧೀರ್, ಸಿಸಿಆರ್ಬಿ ಎಸಿಪಿ ರಾಮಚಂದ್ರ ಹಾಗೂ ಅಶೋಕನಗರ ಇನ್ಸ್ಪೆಕ್ಟರ್ ರವಿ ಇರಲಿದ್ದಾರೆ ಎಂದರು.
ಶೀಘ್ರದಲ್ಲೇ ಸಿ.ಜೆ.ರಾಯ್ ಅವರ ಆತ್ಮಹತ್ಯೆ ಏಕಾಯಿತು, ಏನಾದರೂ ಸಮಸ್ಯೆಗಳಿಂದ ಇದ್ದರಾ? ಎನ್ನುವುದನ್ನು ಎಸ್ಐಟಿ ಪರಿಶೀಲನೆ ಮಾಡುತ್ತದೆ. ಡಿಸೆಂಬರ್ ತಿಂಗಳಲ್ಲಿ ರಾಯ್ ಕಂಪೆನಿ ಮೇಲೆ ಐಟಿ ದಾಳಿಯಾಗಿತ್ತು. ಜ.30ರಂದು ಐಟಿ ಅಧಿಕಾರಿಗಳು ಮತ್ತೆ ರಾಯ್ ವಿಚಾರಣೆಗೆ ಹೋದಾಗ, ಈ ಮಧ್ಯೆ ರಾಯ್ ದಾಖಲೆ ತರುತ್ತೇನೆ ಎಂದು ಹೇಳಿ ಕೊಠಡಿ ಒಳಗೆ ಹೋದವರು ಸುಮಾರು 20 ನಿಮಿಷ ಹೊರಗೆ ಬರದಿದ್ದ ಕಾರಣಕ್ಕೆ, ಬಾಗಿಲು ಹೊಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಇದನ್ನು ಹೊರತುಪಡಿಸಿ, ಸಿ.ಜೆ.ರಾಯ್ ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ತನಿಖೆ ನಡೆಸಲು ಎಸ್ಐಟಿ ರಚಿಸಲಾಗಿದೆ ಎಂದು ಜಿ.ಪರಮೇಶ್ವರ್ ತಿಳಿಸಿದರು.
ಸಿ.ಜೆ.ರಾಯ್ ಮೊಬೈಲ್, ಡೈರಿ ವಶಕ್ಕೆ :
ಸಾವಿರಾರು ಕೋಟಿ ರೂ. ಒಡೆಯನಾಗಿರುವ ಡಾ.ಸಿ.ಜೆ.ರಾಯ್ ಸಾವಿನ ಹಿಂದೆ ಐಟಿ ಅಧಿಕಾರಿಗಳ ಕಿರುಕುಳ ಇದೆಯೇ? ಅಥವಾ ಬೇರೆ ಪಿತೂರಿಗಳಿವೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಈಗಾಗಲೇ ಸಿ.ಜೆ.ರಾಯ್ ಮೊಬೈಲ್, ಡೈರಿ ವಶಕ್ಕೆ ಪಡೆದಿರುವ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದು, ಡೈರಿಯಲ್ಲಿ ರಾಜಕಾರಣಿಗಳು, ನಟಿಯರು ಹಾಗೂ ಮಾಡೆಲ್ಗಳ ಹೆಸರುಗಳು ಉಲ್ಲೇಖವಾಗಿವೆ ಎನ್ನಲಾಗುತ್ತಿದೆ.
ಸದ್ಯ, ಅಶೋಕನಗರ ಪೊಲೀಸರು ಸಿ.ಜೆ.ರಾಯ್ ಅವರ ಮೊಬೈಲ್ ಹಾಗೂ ಪಿಸ್ತೂಲ್ ಅನ್ನು ಜಪ್ತಿ ಮಾಡಿದ್ದು, ತಾಂತ್ರಿಕ ಸಾಕ್ಷ್ಯಗಳಿಗಾಗಿ ಕಾಯುತ್ತಿದ್ದಾರೆ. ಸಿ.ಜೆ. ರಾಯ್ ಅವರು ಸಾವಿಗೂ ಮುನ್ನ ಯಾರಿಗೆ ಕರೆ ಮಾಡಿದ್ದರು? ಯಾರಿಗೆ ಮೆಸೇಜ್ ಕಳುಹಿಸಿದ್ದರು ಎಂಬುದು ತನಿಖೆಗೆ ಸುಳಿವು ನೀಡಲಿದೆ. ಅವರ ಬಳಿಯಿದ್ದ ಐಫೋನ್ ಮತ್ತು ಆ್ಯಂಡ್ರಾಯ್ಡ್ ಫೋನ್ಗಳು ಸದ್ಯ ಪಾಸ್ವರ್ಡ್ನಿಂದ ಲಾಕ್ ಆಗಿವೆ. ಇವುಗಳನ್ನು ಅನ್ಲಾಕ್ ಮಾಡಿ ಮಾಹಿತಿ ರಿಕವರಿ ಮಾಡಲು ಪೊಲೀಸರು ಸಿಐಡಿ ಸೈಬರ್ ಸೆಲ್ ಮೊರೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕುಟುಂಬಸ್ಥರ ಹೇಳಿಕೆ ದಾಖಲು: ದುಬೈನಿಂದ ಬಂದಿಳಿದ ರಾಯ್ ಅವರ ಪತ್ನಿ ಮತ್ತು ಮಕ್ಕಳನ್ನು ಖಾಸಗಿ ಹೋಟೆಲ್ನಲ್ಲಿ ಅಶೋಕನಗರ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಐಟಿ ದಾಳಿಯ ಬಗ್ಗೆ ರಾಯ್ ಅವರು ನಿಮ್ಮ ಬಳಿ ಏನು ಹೇಳಿಕೊಂಡಿದ್ದರು? ಅವರಿಗೆ ಯಾವುದಾದರೂ ಬೆದರಿಕೆ ಕರೆಗಳಿದ್ದವೇ? ಕೊನೆಯ ಬಾರಿ ಅವರು ಯಾರ ಜೊತೆ ಮಾತನಾಡಿದ್ದರು? ಎಂಬ ಹತ್ತು ಹಲವು ಪ್ರಶ್ನೆಗಳನ್ನು ಕೇಳಿ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಾಳೆ ಬನ್ನೇರುಘಟ್ಟದಲ್ಲಿ ಅಂತ್ಯಕ್ರಿಯೆ: ರಾಯ್ ಅವರ ಅಂತ್ಯಕ್ರಿಯೆಯನ್ನು ರವಿವಾರ (ಫೆ.1) ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದು, ಬೆಂಗಳೂರಿನ ಕೋರಮಂಗಲದಲ್ಲಿರುವ ವೈಟ್ ಹೌಸ್ನಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 2 ರವರೆಗೆ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗುತ್ತಿದ್ದು, ಡಾ.ಸಿ.ಜೆ. ರಾಯ್ ಅವರ ಇಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರ್ಯಾಂಡ್ನಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.







