ರಾಜ್ಯದ ಎಲ್ಲೆಡೆ ಸರಕಾರಿ ಭೂಮಿ ಒತ್ತುವರಿ ತೆರವು: ಆ.7ರಂದುಉನ್ನತ ಮಟ್ಟದ ಸಭೆ

ಬೆಂಗಳೂರು, ಆ.4:ರಾಜ್ಯಾದ್ಯಂತ ಸರಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಲು ಮುಂದಾಗಿರುವ ರಾಜ್ಯ ಸರಕಾರ ಆ.7ರಂದು(ಸೋಮವಾರ) ಉನ್ನತ ಮಟ್ಟದ ಸಭೆ ನಡೆಸಲು ತೀರ್ಮಾನಿಸಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಗುರಿ ನಿಗದಿ ಮಾಡಲಾಗಿದ್ದು, ಒತ್ತುವರಿಯಾಗಿರುವ ಸರಕಾರಿ ಭೂಮಿಯ ಪ್ರಮಾಣದ ಬಗ್ಗೆ ಎ.ಟಿ.ರಾಮಸ್ವಾಮಿ ವರದಿ,ಬಾಲಸುಬ್ರಮಣ್ಯ ವರದಿ ಸೇರಿದಂತೆ ಹಲ ವರದಿಗಳು ನಮ್ಮ ಮುಂದಿವೆ.ಅದನ್ನು ಆಧಾರವಾಗಿಟ್ಟುಕೊಂಡು ಒತ್ತುವರಿ ತೆರವು ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅತ್ಯಂತ ಹೆಚ್ಚು ಸರಕಾರಿ ಭೂಮಿ ಒತ್ತುವರಿಯಾಗಿದ್ದು,ಉಳಿದಂತೆ ರಾಜ್ಯದಾದ್ಯಂತ ಗಣನೀಯ ಪ್ರಮಾಣದ ಭೂಮಿ ಒತ್ತುವರಿಯಾಗಿದೆ.ಈ ಮಧ್ಯೆ ಕೊಡಗು,ಹಾಸನ,ಚಿಕ್ಕಮಗಳೂರು ಮತ್ತು ಭಾಗಶ: ಶಿವಮೊಗ್ಗ ಜಿಲ್ಲೆಗಳಲ್ಲಿ ಒತ್ತುವರಿ ಕಾಫಿ ಭೂಮಿಯನ್ನು ಗುತ್ತಿಗೆಗೆ ಕೊಡುವ ಸಂಬಂಧ ಹಿಂದಿನ ಸರಕಾರ ಕೈಗೊಂಡ ತೀರ್ಮಾನವನ್ನು ಯಥಾವತ್ತಾಗಿ ಜಾರಿಗೊಳಿಸುವುದಾಗಿ ಅವರು ಭರವಸೆ ನೀಡಿದರು.





