ಸಿಎಂ ಬದಲಾವಣೆ ಚರ್ಚೆ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ, ನಾವು ಪ್ರತಿಕ್ರಿಯೆ ನೀಡಲ್ಲ: ಶೋಭಾ ಕರಂದ್ಲಾಜೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (File Photo)
ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಚರ್ಚೆಯೂ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿದ್ದು, ಈ ಬಗ್ಗೆ ನಾವು ಪ್ರತಿಕ್ರಿಯೆ ನೀಡಲ್ಲ ಎಂದು ಕೇಂದ್ರದ ರಾಜ್ಯ ಖಾತೆ ಸಚಿವ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ರವಿವಾರ ನಗರದ ಜಿಕೆವಿಕೆ ಆವರಣದ ಅಂತರಾಷ್ಟ್ರೀಯ ಸಮಾವೇಶ ಭವನದಲ್ಲಿ ‘ಸಂಸದ್ ಕ್ರೀಡಾ ಮಹೋತ್ಸವ’ ಭಾಗವಾಗಿ ಅಯೋಜಿಸಲಾಗಿದ್ದ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿಗಳ ವಿತರಣೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಸಂಕಷ್ಟ ಕೇಳುವವರು ಇಲ್ಲ. ಆದರೆ, ಸಿಎಂ ಕುರ್ಚಿ ಬದಲಾವಣೆ ಜಗಳ ನಡೆಯುತ್ತಿದೆ. ಇದರಿಂದ ರಾಜ್ಯಕ್ಕೆ ನಷ್ಟವಾಗುತ್ತಿದೆ ಎಂದು ಹೇಳಿದರು.
2036ರ ಒಲಿಂಪಿಕ್ಸ್ ಗೆ ಅತ್ಯುತ್ತಮ ಕ್ರೀಡಾಪಟುಗಳನ್ನು ರೂಪಿಸುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ನಮ್ಮ ಸರಕಾರ ಕೈಗೊಂಡ ಸಂಸದ್ ಕ್ರೀಡಾ ಮಹೋತ್ಸವವನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು. ಈ ಅಭಿಯಾನದ ಭಾಗವಾಗಿ ನನ್ನೊಂದಿಗೆ ಜೊತೆಯಾಗಿ ನಿಂತ ಎಲ್ಲ ಶಾಸಕರಿಗೆ ಧನ್ಯವಾದ ಎಂದರು.
ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಂಸದ ಪಿ.ಸಿ.ಮೋಹನ್ ಸೇರಿದಂತೆ ಪ್ರಮುಖರಿದ್ದರು.







