ಸಚಿವ ಡಿ. ಸುಧಾಕರ್ ನಿಧನಕ್ಕೆ ಸಿಎಂ, ಡಿಸಿಎಂ ಸಂತಾಪ

ಬೆಂಗಳೂರು: ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವ ಡಿ. ಸುಧಾಕರ್ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ X ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ನಮ್ಮ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಸಚಿವರು, ಹಿರಿಯ ನಾಯಕರು ಆಗಿದ್ದ ಡಿ.ಸುಧಾಕರ್ ಅವರ ಅಕಾಲಿಕ ನಿಧನದಿಂದ ದುಃಖಿತನಾಗಿದ್ದೇನೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ನಾನು ಖುದ್ದು ಆಸ್ಪತ್ರೆಗೆ ಭೇಟಿನೀಡಿ ಸುಧಾಕರ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಂದ ಅವರ ಆರೋಗ್ಯದ ಮಾಹಿತಿ ಪಡೆದಿದ್ದೆ, ಈ ವೇಳೆ ಅವರು ಗುಣಮುಖರಾಗುವ ಭರವಸೆ ನನ್ನಲ್ಲಿ ಮೂಡಿತ್ತು.
ಜನಸೇವೆಯಲ್ಲಿ ಅಪಾರ ಕಾಳಜಿ ಮತ್ತು ಬದ್ಧತೆಯಿದ್ದ ವ್ಯಕ್ತಿ ಸುಧಾಕರ್. ಇಂಥವರು ಇನ್ನಷ್ಟು ಕಾಲ ಜನರ ನಡುವೆ ಇರಬೇಕಿತ್ತು. ವೈದ್ಯರ ನಿರಂತರ ಪ್ರಯತ್ನ, ನಮ್ಮೆಲ್ಲರ ಹಾರೈಕೆಯ ಹೊರತಾಗಿಯೂ ಇಂದು ಸುಧಾಕರ್ ಅವರು ನಮ್ಮನ್ನಗಲಿದ್ದಾರೆ. ಇದು ಅತ್ಯಂತ ನೋವಿನ ಗಳಿಗೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತಕ್ರಿಯಿಸಿ, ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಸಂಪುಟ ಸಹೋದ್ಯೋಗಿ, ಆಪ್ತರೂ ಆಗಿದ್ದ ಡಿ. ಸುಧಾಕರ್ ಅವರು ಇಂದು ಕೊನೆಯುಸಿರೆಳೆದಿದ್ದು ಅತೀವ ದುಃಖವನ್ನುಂಟು ಮಾಡಿದೆ.
ಹಿರಿಯೂರು ಶಾಸಕರು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಡಿ. ಸುಧಾಕರ್ ಅವರು ಉತ್ತಮ ರೀತಿಯಲ್ಲಿ ಜನಪರ ಸೇವೆ ಮಾಡಿದ್ದರು. ಸುಧಾಕರ್ ಅವರು ಇಂದು ಕುಟುಂಬಸ್ಥರು, ಬಂಧುಗಳು ಹಾಗೂ ಅಪಾರ ಸಂಖ್ಯೆಯ ಬೆಂಬಲಿಗರನ್ನು ಅಗಲಿದ್ದು ವಿಷಾದದ ಸಂಗತಿ.
ಭಗವಂತ ಡಿ. ಸುಧಾಕರ್ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಸಂಪುಟ ಸಹೋದ್ಯೋಗಿ, ನನ್ನ ಆತ್ಮೀಯ ಸ್ನೇಹಿತ ಡಿ. ಸುಧಾಕರ್ ಅವರು ಇಂದು ಕೊನೆಯುಸಿರೆಳೆದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ.
— DK Shivakumar (@DKShivakumar) May 10, 2026
ಹಿರಿಯೂರು ಶಾಸಕರು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಡಿ. ಸುಧಾಕರ್ ಅವರು ಜನಪರ ಕಾಳಜಿಯುಳ್ಳ… pic.twitter.com/GFngq5BAYt






