ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಡಿ.ಕೆ.ಶಿವಕುಮಾರ್ ಸಭೆ

ಬೆಂಗಳೂರು : ಸಿಎಂ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸರಕಾರದ ಎಲ್ಲ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ ವಿಧಾನಸೌಧದಲ್ಲಿ ಗುರುವಾರ ನಡೆಯಿತು.
ಸಭೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್, ಸಚಿವರಾದ ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಯುಟಿ ಖಾದರ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.
ಜನ ಸಮುದಾಯಕ್ಕೆ ಹತ್ತಿರವಾಗಿ ಕೆಲಸ ಮಾಡಿ : ಡಿಸಿಎಂ ಜಿ.ಪರಮೇಶ್ವರ್
ಒಳ್ಳೆಯ ಆಡಳಿತ ನೀಡುವುದಾಗಿ ರಾಜ್ಯದ ಜನತೆಗೆ ಭರವಸೆ ನೀಡಿದ್ದೇವೆ. ಸರಕಾರದ ಯೋಜನೆಗಳು ನಿಗದಿತ ಸಮಯದೊಳಗೆ ಜನರಿಗೆ ತಲುಪಲು ಜವಬ್ದಾರಿ ಮತ್ತು ಪಾರದರ್ಶಕವಾಗಿ ಕೆಲಸ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರು ಹೇಳಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಪಾಲ್ಗೊಂಡು, ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ಮೂರು ವರ್ಷಗಳಲ್ಲಿ ಎಲ್ಲ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿ, ಸರಕಾರಕ್ಕೆ ಒಳ್ಳೆಯ ಹೆಸರು ತಂದಿದ್ದೀರಿ. ಅನೇಕ ಭರವಸೆಗಳನ್ನು ಈಡೇರಿಸಲಾಗಿದೆ. ನೂತನ ಮುಖ್ಯಮಂತ್ರಿಗಳ ನೇತೃತ್ವದ ಸರಕಾರವೂ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜನಸಮುದಾಯಕ್ಕೆ ಹತ್ತಿರವಾಗಿ ಕೆಲಸ ಮಾಡಬೇಕು. ನಿಮ್ಮ ಸೇವೆ ಜನಸಮುದಾಯಕ್ಕೆ ಅನುಕೂಲವಾಗಬೇಕು ಎಂದು ಅವರು ಹೇಳಿದರು.






