ಟೋಲ್ ಮುಕ್ತ ಹೆಬ್ಬಾಳ ಮೂರು ಪಥ ಜೋಡಿ ಸುರಂಗ ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ

ಬೆಂಗಳೂರು: "ಬೆಂಗಳೂರಿಗೆ ಹೆಬ್ಬಾಗಿಲಿನಂತೆ ಹೆಬ್ಬಾಳ ಆಗೋಗಿದೆ. ಹೆಬ್ಬಾಳ ಭಾಗದ ಸಂಚಾರ ದಟ್ಟಣೆಗೆ ಒಂದಷ್ಟು ಮುಕ್ತಿ ನೀಡಿದ್ದೇವೆ. ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಮುಂದಿನ ದಿನಗಳಲ್ಲಿ ಬಗೆಹರಿಸುವುದೇ ನಮ್ಮ ಉದ್ದೇಶ" ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಮೇಖ್ರಿ ವೃತ್ತದಿಂದ ಹೆಬ್ಬಾಳ ಜಂಕ್ಷನ್ ವರೆಗೂ ಸುರಂಗ ರಸ್ತೆ ನಿರ್ಮಾಣಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಹೆಬ್ಬಾಳ ಜಂಕ್ಷನ್ ನಲ್ಲಿ ರವಿವಾರ ಶಂಕುಸ್ಥಾಪನೆ ನೆರವೇರಿಸಿದರು.
"2.5 ಕಿಲೋ ಮೀಟರ್ ಉದ್ದದ ಕಟ್ ಅಂಡ್ ಕವರ್ ಟನಲ್ ಇದಾಗಿದ್ದು. ಇದು ಟೋಲ್ ಮುಕ್ತವಾಗಿರಲಿದೆ. ಬಿಡಿಎ ಅವರೇ ತಮ್ಮ ಸಂಪತ್ತು, ಹಣದ ಮೂಲಕ ಈ ಯೋಜನೆ ಕೈಗೆತ್ತಿಕೊಂಡಿದ್ದಾರೆ" ಎಂದು ಹೇಳಿದರು.
"ಜನರ ಬದುಕಿನಲ್ಲಿ ಬದಲಾವಣೆ ತರಲು ಹುಮ್ಮಸ್ಸಿನಿಂದ ನಾವು ಕೆಲಸ ಮಾಡುತ್ತಿದ್ದೇವೆ. ಮುಂದಿನ 50 ವರ್ಷಕ್ಕೆ ಯೋಜನೆ ರೂಪಿಸುತ್ತಿದ್ದೇವೆ. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಹೆಬ್ಬಾಳದಿಂದ ಮೇಲೆ ಕಾವೇರಿ ನೀರು ನೀಡಲು ಅನುಮತಿ ಇರಲಿಲ್ಲ. ಈ ಮೇಕೆದಾಟು ಯೋಜನೆಗೆ ಸಂಬಂಧ ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿದೆ. ನಮ್ಮ ನೀರು ನಮ್ಮ ಹಕ್ಕು ಎಂದು ನಾವೆಲ್ಲರೂ ಹೆಜ್ಜೆ ಹಾಕಿದ್ದೆವು. ಇದಕ್ಕೆ ಫಲ ಸಿಕ್ಕಿದೆ" ಎಂದರು.
ಅವಕಾಶ ಸಿಕ್ಕಾಗ ಜನಪರ ಕೆಲಸ ಮಾಡಬೇಕು
"ಅವಕಾಶ ಸಿಕ್ಕಾಗ ಜನಪರ ಕೆಲಸ ಮಾಡಬೇಕು. ನಾವ್ಯಾರು ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಕೆಂಪೇಗೌಡರು ಇಲ್ಲ ಆದರೆ ಅವರ ಕೆಲಸಗಳಿವೆ, ಎಸ್ ಎಂ ಕೃಷ್ಣ ಅವರ ಹೆಸರಿನಲ್ಲಿ ದಶಪಥ ರಸ್ತೆ ಉದ್ಘಾಟನೆ ಮಾಡಲಾಗಿದೆ. ಬೆಂಗಳೂರು ಬಿಜಿನೆಸ್ ಕಾರಿಡಾರ್ ಎಂದು ಮರನಾಮಕರಣ ಮಾಡಿ ಹೊಸ ಯೋಜನೆ ಮಾಡಲಾಗುತ್ತಿದೆ. 2006 ರಲ್ಲಿಯೇ ಈ ಯೋಜನೆ ಮಾಡಿದ್ದರೆ 2-3 ಸಾವಿರ ಕೋಟಿಗೆ ಈ ಯೋಜನೆ ಮುಗಿಯುತ್ತಿತ್ತು. ಈಗ 24 ಸಾವಿರ ಕೋಟಿ ಆಗುತ್ತಿದೆ. ಅಲ್ಲಿನ ರೈತರಿಗೆ ಒಳ್ಳೆ ಪರಿಹಾರ, ಟಿಡಿಆರ್, ಎಫ್ ಎಆರ್ ನೀಡಲಾಗಿದೆ. 123 ಕಿಲೋ ಮೀಟರ್ ಉದ್ದ ಈ ರಸ್ತೆ ಇರಲಿದೆ.
ಜನರ ಸಮಯ ಉಳಿಸಬೇಕು
"ಹೆಬ್ಬಾಳದಿಂದ ರೇಷ್ಮೆ ಸಂಸ್ಥೆವರೆಗೆ 17 ಕಿಮೀ ಉದ್ದದ ಟನಲ್ ಯೋಜನೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂರು ನಾಲ್ಕು ವರ್ಷದಲ್ಲಿ ಯೋಜನೆ ಮುಗಿಯಲಿದೆ. ಟನಲ್ ರಸ್ತೆಯಲ್ಲಿ ದುಡ್ಡು ಕೊಟ್ಟು ಹೋಗುವವರು ಹೋಗುತ್ತಾರೆ. ನಿಮಗೇನು ತೊಂದರೆ ಎಂದು ಕೇಳುತ್ತೇನೆ. ಇದರಿಂದ ಜನರ ಸಮಯ ಉಳಿಯುತ್ತದೆ. ಹಿಡಿದ ಕೆಲಸವನ್ನು ಮಾಡಬೇಕು. ಜನರ ಸಮಯ ಉಳಿಸುವುದು ಮುಖ್ಯ. ಜನರ ಸಂಜೆ 5-6 ಗಂಟೆ ಮೇಲೆ ಕೆಲಸ ಮುಗಿಸಿ ಮನೆ ಸೇರಬೇಕು. ಇದಕ್ಕೆ ಏನು ಸಹಾಯ ಮಾಡಬೇಕೊ ಅದನ್ನು ಮಾಡುತ್ತಿದ್ದೇವೆ" ಎಂದರು.
ಟೀಕೆ ಮಾಡಿದಷ್ಟು ಎಚ್ಚರಿಕೆಯಿಂದ ಇರಬೇಕು
"1.40 ಕೋಟಿ ಜನಸಂಖ್ಯೆ, 1.35 ಕೋಟಿ ವಾಹನಗಳು ಬೆಂಗಳೂರಿನಲ್ಲಿವೆ. ಇಡೀ ಬೆಂಗಳೂರಿನಲ್ಲಿ ಕಸದ ಸಮಸ್ಯೆಯಿದೆ. ಅದನ್ನು ಬಗೆಹರಿಸುವ ಕೆಲಸವನ್ನು ಯಾರಾದರೂ ಮಾಡಿದ್ದರೇ? ನಾನು ಮುಖ್ಯಮಂತ್ರಿ ಆದ ತಕ್ಷಣ ವಿರೋಧ ಪಕ್ಷದ ನಾಯಕರು 10 ಸಾವಿರ ಕೋಟಿ ಲಂಚ ಹೊಡೆದಿದ್ದೇನೆ ಎಂದು ಆರೋಪ ಮಾಡಿದರು. ಇನ್ನೂ ಟೆಂಡರ್ ಆಗಿಲ್ಲ, ಯಾವುದೂ ತೀರ್ಮಾನ ಆಗಿಲ್ಲ. ಯಂತ್ರೋಪಕರಣಗಳಿಗೆ 4-5 ಸಾವಿರ ಕೋಟಿ ಆಗಬಹುದು ಆದರೆ 10 ಸಾವಿರ ಕೋಟಿ ಎಂದು ಟೀಕೆ ಮಾಡಿದರು. 10 ಸಾವಿರ ಕೋಟಿ ಇಡಲು 20 ದೊಡ್ಡ ಶೆಡ್ ಗಳನ್ನು ಬೇಕಾಗಬಹುದೇನೋ" ಎಂದು ಲೇವಡಿ ಮಾಡಿದ ಮುಖ್ಯಮಂತ್ರಿಯವರು "ಅವರು ಟೀಕೆ ಮಾಡಿದಷ್ಟು ನಾವು ಎಚ್ಚರಿಕೆಯಿಂದ ಇರಬೇಕು. ಅವರ ಟೀಕೆಗಳನ್ನು ನಾವು ಸ್ವಾಗತ ಮಾಡುತ್ತೇವೆ" ಎಂದರು.






