ವಿದ್ಯುತ್ ನಿಗಮಗಳ ಖಾಸಗೀಕರಣ ಬೇಡ ಎನ್ನುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ : ಸಿಎಂ ಡಿ.ಕೆ.ಶಿವಕುಮಾರ್ ಭರವಸೆ

ಬೆಂಗಳೂರು : “ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡದಿರುವ ವಿಚಾರವಾಗಿ ನಾನೊಬ್ಬನೇ ತೀರ್ಮಾನ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ, ನಿಮ್ಮ ಅಭಿಪ್ರಾಯದ ಮೇರೆಗೆ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಭರವಸೆ ನೀಡಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಹಾಗೂ ಅಸೋಸಿಯೇಷನ್ ಒಕ್ಕೂಟದವರು ಬೆಂಗಳೂರು ಅರಮನೆ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಅಭಿನಂದನೆ ಸಮಾರಂಭದಲ್ಲಿ ಶಿವಕುಮಾರ್ ಅವರು ಮಾತನಾಡಿದರು.
“ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡಬಾರದು ಎಂದು ನೀವು ಹೋರಾಟ ಮಾಡುತ್ತಿದ್ದೀರಿ. ನಾನು ಏನು ಮಾತನಾಡಲಿದ್ದೇನೆ ಎಂದು ಎಲ್ಲರೂ ನೋಡುತ್ತಿದ್ದಾರೆ. ಇದು ಪ್ರಸ್ತಾಪವಾಗಿದ್ದು 2003ರಲ್ಲಿ, ಈ ಕುರಿತ ಕಾನೂನು ತಂದವರು ಯಾರು? ಬಿಜೆಪಿ ಸರ್ಕಾರ. ನೀವು ಯಾರೂ ಆಗ ಅದರ ವಿರುದ್ಧ ಧ್ವನಿ ಎತ್ತಲಿಲ್ಲ. ಯಾರೂ ಹೋರಾಟ ಮಾಡಲಿಲ್ಲ, ಧಿಕ್ಕಾರ ಹೇಳಲಿಲ್ಲ. ನನ್ನ ಬಳಿ ಹಾಗೂ ಜಾರ್ಜ್ ಅವರ ಬಳಿ ಬಂದು ಖಾಸಗೀಕರಣಕ್ಕೆ ಅವಕಾಶ ನೀಡಬೇಡಿ ಎಂದು ಹೇಳುತ್ತಿದ್ದೀರಿ. ನೀವು ಸದಾ ನನ್ನ ಜೊತೆ ಇರುತ್ತೀರಿ ಎಂದು ಹೇಳುತ್ತಿದ್ದೀರಿ. ತಪ್ಪು ಮಾಡಿದವರ ವಿರುದ್ಧ ಧಿಕ್ಕಾರ ಹೇಳಿದಾಗ, ಒಳ್ಳೆಯ ಕೆಲಸ ಮಾಡಿದವರಿಗೆ ಜೈಕಾರ ಹೇಳಿದಾಗ ಮಾತ್ರ ಅದಕ್ಕೆ ಗೌರವ ಬರುತ್ತದೆ” ಎಂದು ತಿಳಿಸಿದರು.
ನೀವು ನಮ್ಮನ್ನು ಕಾಳಜಿ ಮಾಡಿದರೆ, ನಾವು ನಿಮ್ಮನ್ನು ಕಾಳಜಿ ಮಾಡುತ್ತೇವೆ
“ನೀವು ಡಿಕೆ, ಡಿಕೆ ಎಂದು ಕೂಗಿದಾಕ್ಷಣ ನಾನು ಹಿಗ್ಗುವುದಿಲ್ಲ, ಜಗ್ಗುವುದಿಲ್ಲ. ನಮ್ಮದು ಏನಿದ್ದರೂ ಗೀವ್ ಅಂಡ್ ಟೇಕ್ (ಕೊಡು, ಕೊಳ್ಳುವ), ಶೇರಿಂಗ್ ಅಂಡ್ ಕೇರಿಂಗ್ ಪದ್ಧತಿ. ನೀವು ನಮಗೆ ಕಾಳಜಿ ತೋರಬೇಕು, ನಾವು ನಿಮಗೆ ಕಾಳಜಿ ತೋರಬೇಕು. ಈ ಒಪ್ಪಂದಕ್ಕೆ ನೀವು ಬದ್ಧರಾಗಿರುತ್ತೀರಾ? 2028ರಲ್ಲಿ ನಿಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು ತಾನೆ? ನುಡಿದಂತೆ ನಡೆಯಬೇಕು, ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಈಗಾಗಲೇ ನಮ್ಮ ಸಚಿವರಾದ ಜಾರ್ಜ್ ಅವರು ಎಲ್ಲಾ ಎಸ್ಕಾಂ ಅಧ್ಯಕ್ಷರುಗಳು ಡಿ.ಕೆ. ಶಿವಕುಮಾರ್ ಕಾಲದಲ್ಲಿ ಯಾವುದೇ ಕಾರಣಕ್ಕೂ ಖಾಸಗೀಕರಣ ಆಗಬಾರದು ಎಂದು ನನಗೆ ಕಿವಿಯಲ್ಲಿ ಹೇಳಿದ್ದಾರೆ. ಈ ವಿಚಾರದಲ್ಲಿ ನನ್ನ ಅಭಿಪ್ರಾಯ ನಾನು ಈಗಾಗಲೇ ಹೇಳಿದ್ದು, ಈ ವಿಚಾರವನ್ನು ನಾನೊಬ್ಬನೇ ತೀರ್ಮಾನ ಮಾಡುವುದಿಲ್ಲ. ನಿಮ್ಮ ಅಭಿಪ್ರಾಯವೇ ನನ್ನ ಅಭಿಪ್ರಾಯ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ” ಎಂದು ವಾಗ್ದಾನ ನೀಡಿದರು.
ಇಂಧನ ಇಲಾಖೆ ಸಿಬ್ಬಂದಿ ಕತ್ತಲನ್ನು ದೂರ ಮಾಡುವ ಕಾಯಕ ಜೀವಿಗಳು
“ದೀಪ ಉರಿಯುವಾಗ ಅದರ ಬೆಳಕು ಕಾಣುತ್ತದೆ. ಅದರ ಹಿಂದೆ ಇರುವ ಬತ್ತಿ ಹಾಗೂ ಎಣ್ಣೆ ಯಾರಿಗೂ ಕಾಣುವುದಿಲ್ಲ. ನೀವೆಲ್ಲರೂ ಕತ್ತಲನ್ನು ದೂರ ಮಾಡುವ ಕಾಯಕ ಜೀವಿಗಳು. ಹಗಲು ರಾತ್ರಿ ಎನ್ನದೇ ನೀವು ಶ್ರಮಿಸುತ್ತಿದ್ದೀರಿ. ಜನರು ತಮ್ಮ ಶಾಸಕರ ದೂರವಾಣಿ ಸಂಪರ್ಕ ಹೊಂದಿರುತ್ತಾರೋ ಇಲ್ಲವೋ ಆದರೆ ಪವರ್ ಮ್ಯಾನ್ ಹಾಗೂ ಇಂಜಿನಿಯರ್ ಗಳ ದೂರವಾಣಿ ಸಂಪರ್ಕ ಇಟ್ಟುಕೊಂಡೇ ಇರುತ್ತಾರೆ. ನಿಮಗೆ ಸರ್ಕಾರವನ್ನು ಅಧಿಕಾರಕ್ಕೆ ತರುವ ಹಾಗೂ ಸರ್ಕಾರವನ್ನು ಅಧಿಕಾರದಿಂದ ತೆಗೆಯುವ ಸಾಮರ್ಥ್ಯವಿದೆ ಎಂದು ನನಗೆ ಅರಿವಿದೆ” ಎಂದರು.
“ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನಾನು ಇಂಧನ ಇಲಾಖೆ ಜವಾಬ್ದಾರಿ ತೆಗೆದುಕೊಂಡಾಗ ಈ ಇಲಾಖೆ ಹೇಗಿತ್ತು, ಈಗ ಹೇಗಾಗಿದೆ ಎಂದು ನೀವು ನೋಡಬಹುದು. ನಾನು ಈ ಜವಾಬ್ದಾರಿ ತೆಗೆದುಕೊಳ್ಳುವಾಗ ಅನೇಕರು ನನಗೆ ಈ ಖಾತೆ ಬೇಡ, ಕೆಟ್ಟ ಹೆಸರು ಬರುತ್ತದೆ ಎಂದು ಸಲಹೆ ನೀಡಿದ್ದರು. ನನಗೆ ಇತಿಹಾಸ ಓದುವುದು, ಸ್ಮರಿಸುವುದರಲ್ಲಿ ನಂಬಿಕೆ ಇಲ್ಲ. ಇತಿಹಾಸ ಸೃಷ್ಟಿಸುವುದರಲ್ಲಿ ಹೆಚ್ಚು ನಂಬಿಕೆ. ಇದನ್ನು ಗಮನದಲ್ಲಿಟ್ಟುಕೊಂಡು ನಾನು ಕೆಲಸ ಮಾಡಿದೆ. ಇಂದು ಕರ್ನಾಟಕದಲ್ಲಿ ನಾನು ಕೈಗೊಂಡಿರುವ ತೀರ್ಮಾನ ದೇಶಕ್ಕೆ ಮಾದರಿಯಾಗಿರುವ ತೀರ್ಮಾನ. ನಾನು ಇಲಾಖೆ ಜವಾಬ್ದಾರಿ ಪಡೆದಾಗ 19% ನಷ್ಟು ಇಂಧನ ಸೋರಿಕೆ ವರ್ಗಾವಣೆ ವೇಳೆ ಆಗುತ್ತಿತ್ತು. ಈಗ ಅದು 10%ಗೆ ಇಳಿಸಲಾಗಿದೆ” ಎಂದು ವಿವರಿಸಿದರು.






