ವಿಪಕ್ಷಗಳಿಗೆ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಶಕ್ತಿಯಿಲ್ಲ : ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‍ಗೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಸರಕಾರವನ್ನು ಎದುರಿಸಲು ಶಕ್ತಿಯಿಲ್ಲದ ಕಾರಣ, ಅಧಿವೇಶನದ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ರವಿವಾರ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ನೆಲದಲ್ಲಿ ಕಾನೂನು ಇದೆ. ಕಾನೂನಿನ ಚೌಕಟ್ಟಿನಲ್ಲಿ ಎಲ್ಲರಿಗೂ ಪ್ರತಿಭಟನೆ ನಡೆಸಲು ಅವಕಾಶವಿದೆ. ಆದರೆ, ಇಂದು ಬಿಜೆಪಿಯವರು ಗೂಂಡಾಗಿರಿ ಮಾಡುತ್ತಿದ್ದಾರೆ. ಕನಿಷ್ಟ ಪಕ್ಷದ ಒಂದು ನೋಟೀಸ್ ಕೊಡದೇ ಅಧಿವೇಶನದ ಕಾರ್ಯಕಲಾಪಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.
ಪ್ರತಿಪಕ್ಷಗಳು ಸದನದಲ್ಲಿ ಧರಣಿ, ಪ್ರತಿಭಟನೆ ಮಾಡುವುದು ತಪ್ಪಲ್ಲ. ಆದರೆ, ಕನಿಷ್ಟ ಪಕ್ಷದ ಒಂದು ನೋಟೀಸು ನೀಡಿ ಚರ್ಚೆ ನಡೆಸಲಿ. ಸಚಿವರ ರಾಜಿನಾಮೆ ಏಕೆ ನೀಡಬೇಕು ಎಂಬುದನ್ನು ಚರ್ಚೆ ಮಾಡಲು ಪ್ರತಿಪಕ್ಷಗಳಿಗೆ ತಾಳ್ಮೆ ಇಲ್ಲ ಎಂದು ಡಿ.ಕೆ.ಶಿವಕುಮಾರ್ ನುಡಿದರು.
ಎಷ್ಟು ಸಚಿವರ ಮೇಲೆ ಮೊಕದ್ದಮೆಗಳಿವೆ: ಪ್ರತಿಪಕ್ಷಗಳಿಗೆ ವಿಧಾನಸಭೆಯಲ್ಲಿ ನಮ್ಮ ಸರಕಾರವನ್ನು ಎದುರಿಸಲು ಶಕ್ತಿಯಿಲ್ಲ. ಇದುವರೆಗೆ ಯಾವ ಸಚಿವರ ಮೇಲೆ ಹಾಗೂ ಕೇಂದ್ರದ ಎಷ್ಟು ಮಂದಿ ಸಚಿವರ ಮೇಲೆ ಮೊಕದ್ದಮೆಗಳಿವೆ ಎಂದು ಅವರೇ ತಿಳಿಸಲಿ ಎಂದು ಶಿವಕುಮಾರ್ ಸವಾಲು ಹಾಕಿದರು.
ಮಾಧ್ಯಮದವರು ದೇಶದ ಯಾವ ಸಚಿವರ ಹಾಗೂ ಯಾವ ಸಿಎಂಗಳ ಮೇಲೆ ಎಷ್ಟು ಮೊಕದ್ದಮೆಗಳಿವೆ ಎಂಬ ದಾಖಲಾತಿಗಳೊಂದಿಗೆ ಪ್ರಶ್ನಿಸಬೇಕು. ಪ್ರತಿಪಕ್ಷಗಳು ಅಂತಹ ಎಷ್ಟು ಸಚಿವರ ಹಾಗೂ ಸಿಎಂಗಳ ರಾಜಿನಾಮೆಯನ್ನು ಕೇಳುತ್ತಿದ್ದಾರೆಂಬುದನ್ನು ಪರಿಶೀಲಿಸಬೇಕು ಎಂದು ಅವರು ತಿಳಿಸಿದರು.
ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 16 ಮಂದಿ ಪರಿಶಿಷ್ಟ ಪಂಗಡ(ಎಸ್‍ಟಿ)ದ ಶಾಸಕರು ಆಯ್ಕೆಯಾಗಿದ್ದಾರೆ. ಹೀಗಾಗಿ ಬಿಜೆಪಿಯವರಿಗೆ ಮತ್ಸರವಿದೆ. ಅವರ ಪಕ್ಷದಲ್ಲಿ ಯಾವುದೇ ಎಸ್‍ಟಿ ನಾಯಕರು ಹೊರಹೊಮ್ಮಲಿಲ್ಲ ಎಂಬ ಅಸಮಾಧಾನವಿರುವ ಕಾರಣ, ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಶಿವಕುಮಾರ್ ಟೀಕಿಸಿದರು.






