ಸತೀಶ್ ಜಾರಕಿಹೊಳಿ ವಿರುದ್ಧ ಈಡಿ ದಾಳಿ ರಾಜಕೀಯ ಪ್ರೇರಿತ : ಸಿಎಂ ಡಿ.ಕೆ.ಶಿವಕುಮಾರ್
"ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಲಾಗುತ್ತಿದೆ, ಎಲ್ಲ ಶಾಸಕರು-ಸಚಿವರಿಗೆ ಎಚ್ಚರಿಕೆ ನೀಡಿದ್ದೇನೆ"

ಬೆಂಗಳೂರು: “ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಈಡಿ) ನಡೆಸುತ್ತಿರುವ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಬಿಜೆಪಿಯವರು ರಾಜಕೀಯಕ್ಕಾಗಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಿಡಿಕಾರಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.
ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಹಾಗೂ ಸಂಬಂಧಿಕರ ಮನೆ ಮೇಲೆ ಈಡಿ ದಾಳಿ ಬಗ್ಗೆ ಕೇಳಿದಾಗ, “ಈ ಹಿಂದೆಯೂ ದಾಳಿ ಮಾಡಿದ್ದರು. ಸತೀಶ್ ಜಾರಕಿಹೊಳಿ ಹಿರಿಯ ಸಚಿವರಾಗಿದ್ದು, ರಾಜಕಾರಣದ ಜತೆಗೆ ವ್ಯವಹಾರ ಮತ್ತು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅವರು ಕಾನೂನಿನ ಚೌಕಟ್ಟಿನಲ್ಲೇ ವ್ಯವಹಾರ ನಡೆಸುತ್ತಿದ್ದಾರೆ.ಈಡಿ ಕೇಳುವ ಪ್ರಶ್ನೆಗಳಿಗೆ ಸತೀಶ್ ಜಾರಕಿಹೊಳಿ ಸೂಕ್ತ ಉತ್ತರ ನೀಡಲಿದ್ದಾರೆ. ಹೀಗಾಗಿ ಯಾರೂ ಗಾಬರಿಯಾಗಬೇಕಿಲ್ಲ. ಸಂಬಂಧಿಕರ ವ್ಯವಹಾರಗಳ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ ಸತೀಶ್ ಜಾರಕಿಹೊಳಿ ಪ್ರಾಮಾಣಿಕ ರಾಜಕಾರಣಿ, ಅವರು ಯಾವುದೇ ತಪ್ಪು ಮಾಡಿಲ್ಲ ಎಂಬ ವಿಶ್ವಾಸ ನಮಗಿದೆ” ಎಂದರು.
“ರಾಜ್ಯ ಸರಕಾರಕ್ಕೆ 100 ದಿನ ಪೂರ್ಣಗೊಳ್ಳಲಿದ್ದು, ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಸಂದರ್ಭದಲ್ಲಿ ಇಂತಹ ತನಿಖಾ ಕ್ರಮಗಳು ನಡೆಯುತ್ತಿರುವುದು ರಾಜಕೀಯ ಉದ್ದೇಶ ಹೊಂದಿದೆ. ನಮ್ಮ ಸರಕಾರ ಮತ್ತು ಪಕ್ಷವನ್ನು ಎಲ್ಲ ಕಡೆಗಳಿಂದಲೂ ಟಾರ್ಗೆಟ್ ಮಾಡಲಾಗುತ್ತಿದೆ. 100 ದಿನಗಳ ಸಂದರ್ಭದಲ್ಲಿ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ರೀತಿ ಮಾಡಲಾಗಿದೆ” ಎಂದು ಆರೋಪಿಸಿದರು.
“ಸತೀಶ್ ಜಾರಕಿಹೊಳಿ ಅವರು ಪ್ರಬಲವಾಗಿ ಬೆಳೆಯುತ್ತಿರುವ ನಾಯಕನಾಗಿರುವುದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ. ಅವರನ್ನು ರಾಜಕೀಯವಾಗಿ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಸತೀಶ್ ಜಾರಕಿಹೊಳಿ ಅವರ ಬೆಳವಣಿಗೆಯನ್ನು ಸಹಿಸಿಕೊಳ್ಳಲು ಆಗದೆ ತೊಂದರೆ ಕೊಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದು ಅವರಿಗೆ ತಿರುಗುಬಾಣವಾಗಲಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ನನ್ನ ಮೇಲೂ ದಾಳಿ ಮಾಡಿ ಬಂಧಿಸಿದ್ದರು. ಆದರೆ ಇಂದು ಏನಾಗಿದೆ? ನಾನು ರಾಜ್ಯದ ಸಿಎಂ ಆಗಿರುವೆ” ಎಂದರು.
ಎಲ್ಲ ಶಾಸಕರು, ಸಚಿವರಿಗೆ ಎಚ್ಚರಿಕೆ ನೀಡಿದ್ದೇನೆ :
“ಮುಂದಿನ ದಿನಗಳಲ್ಲಿ ಇನ್ನೂ ಹಲವು ಕಾಂಗ್ರೆಸ್ ನಾಯಕರು, ಸಚಿವರು ಮತ್ತು ಶಾಸಕರ ಮೇಲೂ ತನಿಖಾ ಸಂಸ್ಥೆಗಳ ಕ್ರಮ ನಡೆಯುವ ಸಾಧ್ಯತೆ ಇದೆ. ಪಕ್ಷದ ಎಲ್ಲ ಶಾಸಕರು ಮತ್ತು ಸಚಿವರಿಗೆ ಎಚ್ಚರಿಕೆಯಿಂದ ಇರುವಂತೆ ಈಗಾಗಲೇ ಸೂಚನೆ ನೀಡಿದ್ದೇನೆ. ತನಿಖೆಗೆ ನಾವು ಹೆದರುವುದಿಲ್ಲ. ಆದರೆ ಸುಳ್ಳು ಕಥೆ ಕಟ್ಟುವುದು, ಸುಳ್ಳು ಆರೋಪ ಮಾಡುವುದು ಹಾಗೂ ಜನರನ್ನು ದಾರಿ ತಪ್ಪಿಸುವ ಪ್ರಯತ್ನವನ್ನು ಖಂಡಿಸುತ್ತೇವೆ. ಬಿಜೆಪಿ ನಾಯಕರ ವಿರುದ್ಧ ಮಾತ್ರ ಯಾವುದೇ ದಾಳಿ ನಡೆಯುವುದಿಲ್ಲ. ಬೋವಿ ಹಗರಣದ ಬಗ್ಗೆ ಈಡಿ ಅವರು ಯಾಕೆ ಪ್ರವೇಶ ಮಾಡಲಿಲ್ಲ. ಬಿಡದಿ, ನೈಸ್ ಯೋಜನೆಗೆ ಸಹಿ ಹಾಕಿ ಆರಂಭಿಸಿದವರು ಅವರೇ ಆದರೆ ಆರೋಪ ಮಾಡುವುದು ನಮ್ಮ ವಿರುದ್ಧ. ಸತ್ಯ ಆಚೆ ಬರಲಿದೆ” ಎಂದರು.
ಕಾಂಗ್ರೆಸ್ ಸರ್ಕಾರ ಸಚಿವ ಸತೀಶ್ ಜಾರಕಿಹೊಳಿಯವರ ಬೆಂಬಲಕ್ಕೆ ನಿಲ್ಲುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ನಾವು ನೂರಕ್ಕೆ ನೂರು ಬೆಂಬಲ ನೀಡುತ್ತೇವೆ. ಸಚಿವರ ಕುಟುಂಬದವರ ಮೇಲೆಯೂ ಈಡಿ ದಾಳಿ ನಡೆಸಿರುವುದು ದುರದೃಷ್ಟಕರ.ಈಡಿ ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಅವರು ಸಮರ್ಥವಾಗಿ ಉತ್ತರ ನೀಡುತ್ತಾರೆ. ಅವರು ಒಬ್ಬ ಪ್ರಗತಿಪರ,ದೂರದೃಷ್ಠಿಯುಳ್ಳ ಪ್ರಾಮಾಣಿಕ ರಾಜಕಾರಣಿ, ಅವರು ಯಾವುದೇ ತಪ್ಪು ಎಸಗಿಲ್ಲ ಎಂಬ ವಿಶ್ವಾಸ ನನಗಿದೆ ಎಂದರು.
ಎಲ್ಲ ವರ್ಗದವರೂ ಸಮಾನರೆಂಬುದು ನಮ್ಮ ಸರಕಾರದ ಚಿಂತನೆ
ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡುತ್ತಿದ್ದಾರಾ ಎಂದು ಕೇಳಿದಾಗ, "ಖಂಡಿತವಾಗಿಯೂ ನಮ್ಮ ಸರಕಾರವನ್ನು, ನಮ್ಮ ಪಕ್ಷವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿಚಾರವಾಗಿ ಮಾತನಾಡಿದ್ದರಲ್ಲಿ ತಪ್ಪಾ? ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿಚಾರದಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರು ಮಾತನಾಡದೇ, ಬಿಜೆಪಿಯವರು ಮಾತನಾಡುತ್ತಾರೆಯೇ? ದೇಶದ ನಾಯಕ ಒಂದು ವೇದಿಕೆಯಲ್ಲಿ ಭಾಷಣ ಮಾಡಿದಾಗ, ಆ ಜಾಗವನ್ನು ಶುದ್ಧ ಮಾಡುತ್ತೇವೆ ಎನ್ನುವುದು ಮಾನವೀಯತೆಯೇ? ನಮ್ಮ ಸರಕಾರ ಪೌರ ಕಾರ್ಮಿಕರ ಪುತ್ರನನ್ನು ಮುಜರಾಯಿ ಸಚಿವರನ್ನಾಗಿ ಮಾಡಿದೆ. ದೇವರು ಎಲ್ಲರಿಗೂ ಸೇರಿದವನು, ಅವನು ಯಾರ ಮನೆಯ ಸ್ವತ್ತಲ್ಲ. ಭಗವಂತ ಎಲ್ಲ ಜಾತಿವರ್ಗದವನಿಗೂ ಸೇರಿದವನು. ದೇವರಿಗೆ ಬಡವ ಶ್ರೀಮಂತ ಎಂಬ ಬೇಧವಿಲ್ಲ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮೇಲ್ವರ್ಗದವರು ಎಲ್ಲರೂ ಸಮಾನರು ಎಂಬುದು ನಮ್ಮ ಸರಕಾರದ ಚಿಂತನೆ. ರೈತರು, ಕಾರ್ಮಿಕರಿಗೆ ಜಾತಿಧರ್ಮಗಳ ಹಂಗಿಲ್ಲ. ಪರಿಶಿಷ್ಠ ಜಾತಿಗೆ ಸೇರಿದ ನಾಯಕರನ್ನು ಮುಗಿಸಲು ಬಿಜೆಪಿಯವರು ಮುಂದಾಗಿದ್ದಾರೆ” ಎಂದು ತಿರುಗೇಟು ನೀಡಿದರು.
ವಿದೇಶಗಳಲ್ಲಿ ವ್ಯವಹಾರ ತಪ್ಪೇ?
ಈಡಿ ತನಿಖಾ ಸಂಸ್ಥೆಯವರು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಕಾಯ್ದೆ ಉಲ್ಲಂಘನೆಯಡಿ ದಾಳಿ ನಡೆಸಿದೆ ಎಂಬ ಇಡಿ ಹೇಳಿಕೆ ಬಗ್ಗೆ ಕೇಳಿದಾಗ, “ಭಾರತದಲ್ಲಿದ್ದುಕೊಂಡು ವಿದೇಶದಲ್ಲಿ ಹೂಡಿಕೆ, ವ್ಯಾಪಾರ ಮಾಡಲು ಕಾನೂನಿನಡಿ ಅವಕಾಶವಿದೆ. ಅವರ ಕುಟುಂಬ ಸದಸ್ಯರು ವಿದೇಶದಲ್ಲಿ ವ್ಯವಹಾರ ಮಾಡುವುದು ತಪ್ಪಲ್ಲ. ನನ್ನ ಕುಟುಂಬದವರೂ ವಿದೇಶದಲ್ಲಿ ವ್ಯವಹಾರ ಇರಿಸಿಕೊಳ್ಳುವುದನ್ನು ನಾನು ನಿರ್ಬಂಧಿಸಲು ಸಾಧ್ಯವೇ? ಈ ಇಡಿ ದಾಳಿಯನ್ನು ರಾಜಕೀಯ ಉದ್ದೇಶದಿಂದ ಮಾಡಲಾಗಿದೆ. ಈ ಧೋರಣೆಯಿಂದಾಗಿಯೇ 12 ಲಕ್ಷಕ್ಕೂ ಹೆಚ್ಚು ಉದ್ದಿಮೆದಾರರು ಭಾರತವನ್ನು ತೊರೆದಿದ್ದು, ಇಂತಹ ಬೆಳವಣಿಗೆ ದೇಶದ ಆರ್ಥಿಕ ಪರಿಸ್ಥಿತಿಗೂ ತೊಂದರೆಯುಂಟು ಮಾಡುತ್ತದೆ” ಎಂದರು.






