ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳ ಭತ್ಯೆ ಬಗ್ಗೆ ಶೀಘ್ರ ತೀರ್ಮಾನ : ಸಿಎಂ ಡಿ.ಕೆ.ಶಿವಕುಮಾರ್
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ

ಬೆಂಗಳೂರು: "ನವೆಂಬರ್ 1ನೇ ತಾರೀಕಿನೊಳಗೆ ಪರವಾನಗಿ ಇಲ್ಲದ ಅಕ್ರಮ ಬಂದೂಕು ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಇಲ್ಲದಿದ್ದರೇ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಶಿವಕುಮಾರ್ ಅವರು ಮಾತನಾಡಿದರು.
"ಅಕ್ರಮ ಶಸ್ತ್ರಾಸ್ತ್ರಗಳನ್ನು ತಾವಾಗಿಯೇ ಒಪ್ಪಿಸಿದರೆ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಹೆಚ್ಚಿನ ಅರಣ್ಯ ಇಲಾಖೆ ಸಿಬ್ಬಂದಿಗಳು ಪರವಾನಗಿ ಇಲ್ಲದೇ ಇರುವ ಬಂದೂಕುಗಳಿಂದಲೇ ಜೀವ ಕಳೆದುಕೊಂಡಿದ್ದಾರೆ. ನೀವು ನಿಮ್ಮ ಹಾಗೂ ನಿಮ್ಮ ಪ್ರಾಣಿಗಳ ರಕ್ಷಣೆಗಾಗಿ ಬಂದೂಕು ಇಟ್ಟುಕೊಳ್ಳುವುದಾದರೆ ಪರವಾನಗಿ ಪಡೆಯಿರಿ" ಎಂದು ಸಂದೇಶ ನೀಡಿದರು.
"ಈ ಹಿಂದೆ ರಾಮಮೂರ್ತಿ ಎನ್ನುವ ಹಿರಿಯ ಅಧಿಕಾರಿ ಅನೇಕರು ಅಕ್ರಮ ನಾಡ ಬಂದೂಕುಗಳನ್ನು ಹೊಂದಿರುವ ಬಗ್ಗೆ ಹೇಳಿದ್ದರು. ಆಗ ನಾನು ನನ್ನ ಕ್ಷೇತ್ರದಲ್ಲಿ 300 ಕ್ಕೂ ಹೆಚ್ಚು ಬಂದೂಕುಗಳನ್ನು ಜನರಿಂದ ಸರ್ಕಾರಕ್ಕೆ ಒಪ್ಪಿಸಿದ್ದೆ. ಇನ್ನೂ ಹೆಚ್ಚಿನ ನಾಡ ಬಂದೂಕುಗಳು ಇರುವ ಬಗ್ಗೆ ಸರ್ಕಾರಕ್ಕೆ ಮಾಹಿತಿಯಿದೆ" ಎಂದರು.
ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳ ಭತ್ಯೆ ಬಗ್ಗೆ ಶೀಘ್ರ ತೀರ್ಮಾನ
"ದೇಶದ ಅರಣ್ಯ ಸಂಪತ್ತನ್ನು ಕಾಪಾಡುವವರು ನೀವು. ವನ್ಯಜೀವಿಗಳ ಜೊತೆ ಸಂಘರ್ಷ ಏರ್ಪಟ್ಟು ಅನೇಕ ಸಿಬ್ಬಂದಿಗಳು ಪ್ರಾಣ ತ್ಯಾಗ ಮಾಡಿದ್ದಾರೆ. ಇಲಾಖೆಯ ಸಿಬ್ಬಂದಿಗಳ ಭತ್ಯೆಯ ವಿಚಾರವಾಗಿ ಸಚಿವರ ಮನವಿಯ ಬಗ್ಗೆ ಆಲೋಚಿಸಲಾಗುವುದು. ಆರ್ಥಿಕ ಇಲಾಖೆಯ ಬಳಿ ಚರ್ಚೆ ನಡೆಸಿ ಪೊಲೀಸ್ ಇಲಾಖೆಯನ್ನೂ ಒಳಗೊಂಡಂತೆ ಒಟ್ಟಾಗಿ ತೀರ್ಮಾನ ಮಾಡಲಾಗುವುದು" ಎಂದರು.
"ಅರಣ್ಯಕ್ಕೂ ನನಗೂ ಬಹಳ ಹತ್ತಿರದ ಸಂಬಂಧ. ನನ್ನ ಊರು, ಮನೆ, ಕ್ಷೇತ್ರ ಬದುಕು ಎಲ್ಲವೂ ಅರಣ್ಯಕ್ಕೆ ಹೊಂದಿಕೊಂಡೇ ಇದೆ. ಅರ್ಕಾವತಿಯಲ್ಲಿ ಮಹಶೀರ್ ಮೀನುಗಳಿದ್ದವು ನಾನೂ ಸಹ ಮೀನಿಗೆ ಗಾಳ ಹಾಕಿ ಕುಳಿತುಕೊಳ್ಳುತ್ತಿದ್ದೆ" ಎಂದರು.
"ಈ ಕಾರಣಕ್ಕೆ ನನಗೂ ಅರಣ್ಯ ಮಂತ್ರಿ ಆಗುವ ಆಸೆಯಿತ್ತು. ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಅವಕಾಶ ಕೇಳಿದ್ದೆ. ಆದರೆ ಅವರು ಕೃಷಿ ಸಚಿವನನ್ನಾಗಿ ಮಾಡಿದರು. ನಂತರ ಮನಸ್ಸು ಬದಲಾಯಿಸಿ ಕೃಷಿ ಇಲಾಖೆಯನ್ನು ಜಯಚಂದ್ರ ಅವರಿಗೆ ನೀಡಿ, ನನಗೆ ಸಹಕಾರ ಇಲಾಖೆ ನೀಡಿದರು. ನನಗಾಗ 38 ವರ್ಷ. ಸಚಿವ ಸಂಪುಟ ವಿಸ್ತರಣೆ ಆದಾಗಲೂ ಅರಣ್ಯ ಇಲಾಖೆ ನೀಡದೆ ನಗರಾಭಿವೃದ್ಧಿ ಇಲಾಖೆ ನೀಡಿದರು. ಇದೇ ವೇಳೆಯಲ್ಲಿ ರಾಜಕುಮಾರ್ ಅವರ ಅಪಹರಣ ಘಟನೆ ನಡೆಯಿತು" ಎಂದು ಮೆಲುಕು ಹಾಕಿದರು.
ಅರಣ್ಯ ಅಧಿಕಾರಿಗಳು ಅಭಿವೃದ್ಧಿ ಕೆಲಸಗಳ ಪರವಾಗಿ ನಿಲ್ಲಿ
"ಜನ ಸಾಮಾನ್ಯರು ಪೊಲೀಸರನ್ನು ಒಪ್ಪಿಕೊಳ್ಳುತ್ತಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಒಪ್ಪುವುದಿಲ್ಲ. ಅರಣ್ಯ ಅಂಚಿನ ಜನರೊಂದಿಗೆ ಸ್ನೇಹದ ವಾತಾವರಣ ನಿರ್ಮಿಸಿಕೊಳ್ಳಿ. ಅರಣ್ಯ ಒತ್ತುವರಿ ಇಂದು ನೆನ್ನೆಯದಲ್ಲ. ಅದನ್ನು ಕಾನೂನು ಪ್ರಕಾರ ಅದನ್ನು ಬಗೆಹರಿಸೋಣ. ಜನರ ಮೇಲೆ ಒತ್ತಡ ಹೇರಬೇಡಿ. ಅರಣ್ಯ ಇಲಾಖೆಯ ಅಧಿಕಾರಿಗಳು ಕೆಲವೊಂದು ವಿಚಾರದಲ್ಲಿ ಅತಿಯಾಗಿ ವರ್ತಿಸುತ್ತೀರಿ. ಅಭಿವೃದ್ಧಿ ಕೆಲಸಗಳಿಗೆ ಅಡ್ಡ ಬರಬಾರದು. ಕೆಲವೊಂದು ವಿನಾಯಿತಿಗಳನ್ನು ನೀಡಬೇಕು" ಎಂದರು.
"ಈ ಭೂಮಿ ನಮಗೆ ಸೇರಿದ್ದಲ್ಲ. ಆದರೆ ಭೂಮಿ ಕಾಪಾಡಬೇಕಿರುವುದು ನಮ್ಮ ಕರ್ತವ್ಯ. ಎಷ್ಟೇ ದೊಡ್ಡವರಾದರೂ ಕೊನೆಗೆ ಭೂಮಿಗೆ ಸೇರುತ್ತೇವೆ. ಚಿತೆಯಲ್ಲಿ ಸುಡುವ ಮರವೂ ಭೂಮಿ ಮೇಲೆಯೇ ಬೆಳೆಯುತ್ತದೆ. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳು ಈ ಇಲಾಖೆಯಲ್ಲಿದ್ದಾರೆ. ಇವರಿಂದ ಅನೇಕ ಕಡೆ ಕಾಡು ಸುರಕ್ಷಿತವಾಗಿದೆ" ಎಂದರು.
ತೇಗದ ಸಿರಿ ಯೋಜನೆ ಯಶಸ್ಸಿಗೆ ಶ್ರಮಿಸಿ
"ತೇಗದ ಸಿರಿ ಯೋಜನೆ ಯಶಸ್ಸಿಗೆ ಅರಣ್ಯ ಅಧಿಕಾರಿಗಳು ಕೆಲಸ ಮಾಡಬೇಕು. ರೈತರಿಗೆ ಇದರಿಂದ ಹೆಚ್ಚಿನ ಲಾಭವಾಗುತ್ತದೆ. ಅರಣ್ಯ ಇಲಾಖೆಯ ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಕಡೆ ಎಲ್ಲರೂ ಗಮನ ಹರಿಸಬೇಕು. ಕೆ ಎಚ್ ರಂಗನಾಥ್ ಅವರು ಇಲಾಖೆ ಸಚಿವರಾಗಿದ್ದಾಗ ಶ್ರೀಗಂಧವನ್ನು ಖಾಸಗಿ ಜಮೀನಿನಲ್ಲೂ ಬೆಳೆಯಲು ಅವಕಾಶ ನೀಡಿದರು" ಎಂದು ಹೇಳಿದರು.
"ಕಸ್ತೂರಿ ರಂಗನ್ ವರದಿಯನ್ನು ಮೂರು- ನಾಲ್ಕು ಸಲ ವಾಪಸ್ ಕಳುಹಿಸಿದೆವು. ನಮಗೊಂದು ನ್ಯಾಯ, ಕೇರಳಕ್ಕೆ ಒಂದು ನ್ಯಾಯ ನೀಡಲಾಗಿದೆ. ಇದರ ಬಗ್ಗೆ ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆಯಲಾಗುತ್ತದೆ" ಎಂದರು.






